ಈ ಮನಸು

ಈ  ಮನಸು █║▌│█│║▌║││█║▌║█║▌│█│║
ಈ ಮನಸು Verified Officia

ಕತ್ತೆ ಮೈ ಹೊರೆತಕ್ಕೆ ನವಿಲ ಮೈ ಮೆರೆತಕ್ಕೆ |ಹೊತ್ತು ತರಲಾದೀತೆ ನವಿಲು ಭಾರಗಳ ||ನೃತ್ತಕ್ಕೆ  ಗೆಜ್ಜೆ ತೊಡುವುದೆ ಕತ್ತೆ? ಧರ್ಮಗಳ |ಗೊತ್ತು ಗುಣ...
27/05/2026

ಕತ್ತೆ ಮೈ ಹೊರೆತಕ್ಕೆ ನವಿಲ ಮೈ ಮೆರೆತಕ್ಕೆ |
ಹೊತ್ತು ತರಲಾದೀತೆ ನವಿಲು ಭಾರಗಳ ||
ನೃತ್ತಕ್ಕೆ ಗೆಜ್ಜೆ ತೊಡುವುದೆ ಕತ್ತೆ? ಧರ್ಮಗಳ |
ಗೊತ್ತು ಗುಣಯುಕ್ತಿಯಿನೊ ಮರುಳ ಮುನಿಯ || ೧೭೬

ಹೊರೆತ = ಹೊರುವುದು
ಮೆರೆತ = ಕುಣಿತ
ನೃತ್ತ= ನೃತ್ಯ
ಧರ್ಮ = ಕರ್ತವ್ಯ

ಪ್ರಪಂಚ ವಿಶಾಲವಾಗಿದೆ ಮತ್ತು ಇಲ್ಲಿ ಎಲ್ಲ ಪ್ರಾಣಿಗಳಿಗೂ ತಮ್ಮದೇ ಕೆಲಸಗಳೂ, ಜವಾಬ್ದಾರಿಗಳೂ ಇವೆ. ಅವುಗಳ ಕೆಲಸವನ್ನು ಅವು ನಿರ್ವಹಿಸುವುದು ಧರ್ಮವೆನಿಸುತ್ತದೆ.

ಒಂದು ಸಮಾಜದ ಒಳಗೆ ಪರಸ್ಪರ ಸಹಕಾರಿಯಾಗುವಂತೆ ಬದುಕಬೇಕಾದರೆ ಪ್ರತಿಯೊಬ್ಬರೂ ತಮ್ಮ ಕಸುಬುಗಳನ್ನು ಸರಿಯಾಗಿ ನಿರ್ವಹಿಸಬೇಕು. ಕಸುಬುಗಳು ತಮ್ಮಿಚ್ಛೆಗೆ ಅನುಗುಣವಾಗಿ ಇರಬೇಕು. (ಕಸುಬುಗಳೆಂದಿಗೂ ಜಾತಿಸೂಚಕವಾಗಬಾರದು)

ಇಂದು ಎಲ್ಲ ಜಾತಿಯ ಜನರೂ ತಮ್ಮ ಮನಕೊಪ್ಪಿತವಾದ ಕಸುಬುಗಳಲ್ಲಿ ತೊಡಗಿದ್ದಾರೆ. ಇದು ಸಮಾಜದಲ್ಲಿ ಉತ್ತಮ ಬೆಳವಣಿಗೆಯಾಗಿದೆ.

ಅದನ್ನೇ ಇಲ್ಲಿ ಸಂಕೇತವಾಗಿ ವಿವರಿಸಲಾಗಿದೆ.
"ಮೈಮುರಿದು ದುಡಿದವಗೆ ಮನೋರಂಜನೆಯೂ ಬೇಕು. ಮನೋರಂಜನೆ ಪಡೆಯಲು ಮೈ ಬಗ್ಗಿಸಿ ದುಡಿಯಬೇಕು".

ಕತ್ತೆ ಭಾರವನ್ನು ಹೊರುವುದರಲ್ಲಿ ಪರಿಣತಿ ಹೊಂದಿದೆ. ಹಾಗೆಯೇ ನವಿಲು ತನ್ನ ಕುಣಿತಕ್ಕೆ ಪ್ರಸಿದ್ಧವಾಗಿದೆ. ಅವೆರಡನ್ನು ಪ್ರತ್ಯೇಕವಾಗಿಸಿ ನವಿಲನ್ನು ಹೊರು ಎಂದು, ಕತ್ತೆಯನ್ನು ಕುಣಿ ಎಂದೂ ಆದೇಶಿಸಿದರೆ ಸಾಧ್ಯವಾದೀತೆ. ಅವುಗಳ ಗುಣ ಧರ್ಮದ ರೀತಿಯಲ್ಲಿ ವರ್ತಿಸಬೇಕು. ಆಗಲೇ ಅದಕ್ಕೊಂದು ಸೊಗಸು.

ಜಗತ್ತು ವೈವಿಧ್ಯಗಳಿಂದ ಕೂಡಿರುವುದು ಈ ಕಾರಣದಿಂದಲೇ ಆಗಿದೆ.

ಇದಕ್ಕೆ ಹುಳಿಹಿಂಡುವ ಸಂಕರದ ಕಾರಣವೇ, ಅಥವಾ ಸಂಕರವನ್ನು ಮಾಡುವುದೇ ವೃತ್ತಿಯಾದರೆ ಜಗವು ವಿರೋಧಾಭಾಸಗಳಿಂದ ಮುಳುಗಿಹೋದೀತು.

ಪರಿಪರಿಯ ಮೃಷ್ಟಾನ್ನ ಭಕ್ಷ್ಯ ಭೋಜ್ಯಗಳು ತಾ |ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ ||ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು |ಹೊರೆಯೆ ಅರಿವಾಗ...
26/05/2026

ಪರಿಪರಿಯ ಮೃಷ್ಟಾನ್ನ ಭಕ್ಷ್ಯ ಭೋಜ್ಯಗಳು ತಾ |
ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ ||
ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು |
ಹೊರೆಯೆ ಅರಿವಾಗದೊಡೆ ಮರುಳ ಮುನಿಯ || ೧೭೫

ಮೃಷ್ಟಾನ್ನ = ರಸಕವಳ, ಭರ್ಜರಿ ಊಟ.
ಭಕ್ಷ್ಯ = ಸಿಹಿತಿಂಡಿ.
ಭೋಜ್ಯ = ತಿನ್ನುವ ಪದಾರ್ಥಗಳು.
ಅರಗಿ = ಪಚನವಾಗಿ.
ಪೀಡೆ = ತೊಂದರೆ.
ಪೊಡೆ= ಹೊಟ್ಟೆ.
ಹೊರೆ= ಹೆಚ್ಚಿನ ಭಾರ.

ಯಾವ ವಿಚಾರವಾಗಲಿ ಅದು ಉಪಯೋಗಕ್ಕೆ ಬರಬೇಕು. ಇಲ್ಲವಾದಲ್ಲಿ ಅದನ್ನು ಪೋಷಿಸಿದರೆ ವ್ಯರ್ಥವೇ ಸರಿ. ವ್ಯಕ್ತಿಗೆ ಸಂಬಂಧಿಸಿದಂತೆ ಇದ್ದರೆ ಅದು ವ್ಯಕ್ತಿಗೆ ಅಥವಾ ಅವನ ಕುಟುಂಬಕ್ಕೆ ಉಪಯುಕ್ತವಾದೀತು. ಸಮಾಜಕ್ಕೆ ಸಂಬಂಧಿಸಿದ್ದರೆ ಅದು ಲೋಕ ಕಲ್ಯಾಣಕ್ಕೆ ಕಾರಣವಾದೀತು.

ಆಹಾರವು ಎಷ್ಟು ಚೆನ್ನಾಗಿದ್ದರೂ ಸವಿರುಛಿಯ ರಸಪಾಕಗಳಾಗಿದ್ದರೂ, ಅವುಗಳನ್ನು ತಿಂದಾಗ ಅವು ನಮ್ಮ ಉದರಕ್ಕೆ ಸೇರಿ ಅರಗಿ ಅದರ ಸತ್ತ್ವವು ನಮ್ಮ ರಕ್ತದೊಂದಿಗೆ ಬೆರೆತರೆ ಅದು ಸಾರ್ಥಕವಾಗುತ್ತದೆ.

ಒಂದು ವೇಳೆ ಅದು ಪಚನವಾಗಿ ರಕ್ತದೊಂದಿಗೆ ಬೆರೆಯದಿದ್ದರೆ ಅದೇ ರಸಗವಳವು ನಮ್ಮ ಹೊಟ್ಟೆಯಲ್ಲಿ ನೋವುಂಟುಮಾಡಿ ವಿಷಾಹಾರವಾಗಿ ಪರಿಣಮಿಸೀತು.

ಅದೇ ಪ್ರಕಾರವಾಗಿ ಬರಿಯ ಓದು, ಬರಿಯ ವಾದ, ಬರಿಯ ಭಕ್ತಿಗಳು ಮಾನವರಿಗೆ ಹೊರೆಯೇ ಆಗುತ್ತದೆ.

ಬರಿಯೋದನ್ನು ಗಿಳಿಯೋದು ಎನ್ನುತ್ತಾರೆ. ಅರ್ಥವಾಗದ, ಉಪಯೋಗಕ್ಕೆ ಬಾರದ ವಿದ್ಯೆಯಿಂದ ಯಾವ ಲಾಭವೂ ಇಲ್ಲ. ಒಣಚರ್ಚೆ, ವಿತಂಡವಾದಗಳಿಂದ ಯಾವ ಸಿದ್ಧಾಂತವೂ ಪ್ರಕಾಶಿಸುವುದಿಲ್ಲ.

ಬರಿಯ ಭಕ್ತಿಯಲ್ಲಿ ಸಮರ್ಪಣಾ ಭಾವ ಇರುವುದಿಲ್ಲ. ಬರಿಯ ಯಾಂತ್ರಿಕತೆ ತುಂಬಿರುತ್ತದೆ. ಯಾವುದು ಅರಿವಿಗೆ ಬರುವುದಿಲ್ಲವೋ ಅವುಗಳಿಂದ ಯಾವ ಪ್ರಯೋಜನವೂ ಆಗುವುದಿಲ್ಲ.

ನಿಗಮರ್ಷಿಗಳ ಜೀವನೋತ್ಸಾಹ ಭರವೆಲ್ಲಿ |ಜಗ ಮಣ್ಣು ಬಾಳ್ಗಾಳಿಯೆನುವ ನಾಮೆಲ್ಲಿ? ||ಭಗವದ್ವಿಲಾಸದಲಿ ಭಾಗಕನುಗೂಡದನು |ಮಗುವೆಂತು ಮನುಕುಲಕೆ ಮರುಳ ಮು...
24/05/2026

ನಿಗಮರ್ಷಿಗಳ ಜೀವನೋತ್ಸಾಹ ಭರವೆಲ್ಲಿ |
ಜಗ ಮಣ್ಣು ಬಾಳ್ಗಾಳಿಯೆನುವ ನಾಮೆಲ್ಲಿ? ||
ಭಗವದ್ವಿಲಾಸದಲಿ ಭಾಗಕನುಗೂಡದನು |
ಮಗುವೆಂತು ಮನುಕುಲಕೆ ಮರುಳ ಮುನಿಯ || ೧೭೪

ನಿಗಮ= ವೇದ
ನಿಗಮರ್ಷಿ= ವೇದಗಳನ್ನು ಅಧ್ಯಯನ ಮಾಡಿದವ.
ಭಾಗಕನುಗೂಡದನು= ಭಾಗಕೆ ಅನುಗೂಡದವನು, ಹೊಂದಿಕೊಳ್ಳದವನು.

ಜಗದ ಬೆಡಗು ಇರುವುದೇ ಹೊಂದಾಣಿಕೆಯಲ್ಲಿ. ವಿಶ್ವವು ಎಂದಿಗೂ ನಮಗೆ ಹೊಂದಿಕೊಳ್ಳುವುದಿಲ್ಲ. ಬದಲಿಗೆ ನಾವೇ ಜಗತ್ತಿಗೆ ಹೊಂದಿಕೊಂಡು ಬಾಳಬೇಕು.

ವೇದಾಧ್ಯಯನ ಮಾಡಿದವರ ಜೀವನದ ಉತ್ಸಾಹವನ್ನು ಕಂಡಾಗ ಅಚ್ಚರಿಯಾಗುತ್ತದೆ. ಅವರು ತಮ್ಮ ಅವಿರತವಾದ ಅಧ್ಯಯನದ ನಡುವೆಯೂ ಲೋಕಕಲ್ಯಾಣದ ಚಿಂತನೆಯನ್ನು ಬಿಡುವುದಿಲ್ಲ. ತಮ್ಮೆಲ್ಲ ಶ್ರಮವನ್ನು ಜಗದ ಒಳಿತಿಗಾಗಿಯೇ ಮೀಸಲಿಡುತ್ತಾರೆ.

ಸಾಮಾನ್ಯ ಜನ ಹಾಗಲ್ಲ. ಬದುಕಿನಲ್ಲಿ ನಿರಾಸೆಯ ಮಡುವಿನಲ್ಲಿಯೇ ಮುಳುಗಿಹೋಗುತ್ತಾರೆ. ಯಾರಿಗೆ ಜೀವನೋತ್ಸಾಹ ಇರುವುದಿಲ್ಲವೋ ಅವರಿಗೆ ಈ ಬದುಕಿನ ಬಗ್ಗೆ ಪ್ರಪಂಚದ ಬಗ್ಗೆ ಯಾವ ಆಸಕ್ತಿಯೂ ಉಳಿದಿರುವುದಿಲ್ಲ.

ಸ್ವಾರ್ಥ ರಹಿತವಾದ ಬದುಕು ಸಮಾಜ ಮುಖಿಯಾಗಿ ಕೆಲಸ ಮಾಡುತ್ತದೆ. ಎಲ್ಲವೂ ತನಗೇ ಬೇಕೆನ್ನುವವನಿಗೆ ಬದುಕು ಯಾವುದೇ ಭರವಸೆ ನೀಡದು. ಕಾರಣ ಅವನ ಬಾಳಿನಲ್ಲಿ ವೈವಿಧ್ಯತೆಯು ಗೋಚರಿಸುವುದಿಲ್ಲ. ಅದು ಕೇವಲ ಏಕಮುಖ ಸಂಚಾರಿ. ತಾನೊಬ್ಬನೇ ಇರುವ ಸ್ವಾರ್ಥ ಮೂಲದಲ್ಲಿ ಸಂತಸದ ಬೇರು ಚೆನ್ನಾಗಿ ಬೆಳೆಯುವುದಿಲ್ಲ. ನೀರಸವು ತುಂಬಿ ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳುತ್ತಾನೆ.

ಜಗತ್ತು ಭಗವಂತನ ಲೀಲೆ ಎಂದ ಮೇಲೆ ನಾವು ಅದರಲ್ಲಿ ಪಾಲ್ಗೊಳ್ಳಲೇ ಬೇಕು. ಯಾರು ಅದರಿಂದ ವಿಮುಖರಾಗುತ್ತಾರೋ ಅವರು ಮನುಕುಲದ ಮಗುವಾಗಲಾರರು.

ಮನುಕುಲದ ಮಗುವೆಂದರೆ ಒಂದು ಅರ್ಥದಲ್ಲಿ ಮಾನವರ ಉತ್ತರಾಧಿಕಾರಿ. ಕಲಿಕೆಯಿರದ, ಕುತೂಹಲವಿರದ, ಮಕ್ಕಳನ್ನು ಕಾಣಲು ಸಾಧ್ಯವೇ. ಮಕ್ಕಳು ಸದಾ ಉತ್ಸಾದ ಚಿಲುಮೆಗಳೇ ಆಗಿರುತ್ತಾರೆ. ಅಂತಹ ಜೀವನೋತ್ಸಾಹ ನಮ್ಮದಾಗಲಿ.

ಆದಿಕವಿಗಳ  ವಿಶ್ವಸತ್ಯದೃಷ್ಟಿಯಿನೊಗೆದ |ವೇದನದಿ ಮೂರು ಕವಲಾಯ್ತು ಟೀಕೆಗಳಿಂ ||ರೋದಿಸುವ ವೈರಾಗ್ಯ , ಬೋಧೆಯಗಲಿದ ಕರ್ಮ |ವಾದದೊಣ ರಗಳೆಯವು ಮರುಳ ...
24/05/2026

ಆದಿಕವಿಗಳ ವಿಶ್ವಸತ್ಯದೃಷ್ಟಿಯಿನೊಗೆದ |
ವೇದನದಿ ಮೂರು ಕವಲಾಯ್ತು ಟೀಕೆಗಳಿಂ ||
ರೋದಿಸುವ ವೈರಾಗ್ಯ , ಬೋಧೆಯಗಲಿದ ಕರ್ಮ |
ವಾದದೊಣ ರಗಳೆಯವು ಮರುಳ ಮುನಿಯ || ೧೭೩

ಆದಿಕವಿಗಳು = ಋಷಿ ಮುನಿಗಳು, ದ್ರಷ್ಟ್ರಾರರು.
ವೇದನ= ಚುಚ್ಚುವಿಕೆ, ಹೇಳುವಿಕೆ, ಗ್ರಹಿಕೆ.
ರೋದನೆ = ಅಳು.
ಬೋಧೆ= ತಿಳುವಳಿಕೆ. ಜ್ಞಾನ.
ಒಣರಗಳೆ = ಬರಿ ತರ್ಕ.

ಜಗದ ವಿಚಾರಗಳು ಬಹುತೇಕ ಮೂರು ರೀತಿಯಲ್ಲಿ ಪ್ರಚುರವಾಗುತ್ತವೆ. ಮಹತ್ತರವಾದ ವಿಚಾರಗಳನ್ನು ತಮ್ಮ ತಿಳುವಳಿಕೆಯ ಮೂಲಕ ವಿಶ್ವದ ಕಲ್ಯಾಣಕ್ಕಾಗಿ ಸತ್ಯದ ಸಾಕ್ಷಾತ್ಕಾರವನ್ನು ತೋರಿಸುವ ಸನಾತನ ಸಜ್ಜನರು ನಮಗೆ ಮಾದರಿಯಾಗಬೇಕು.

ಆದರೆ, ಬದುಕಿನ ಬೆರಗು ಮತ್ತು ಬೆಡಗುಗಳು ಯಾವಾಗಲೂ ಮಾನವರ ಅನಿಸಿಕೆಗಳಿಗೆ ವಿರುದ್ಧವಾಗಿಯೇ ಇರುತ್ತವೆ. ಹೇಳುವವರ ದೃಷ್ಟಿಯಂತೆ ಕೇಳುಗರ ದೃಷ್ಟಿ ಇರುವುದಿಲ್ಲ. ಬದಲಿಗೆ ನಮ್ಮ ಮೂಗಿನ ನೇರಕ್ಕೆ ಚಿಂತಿಸುವ ಜನಗಳಿಂದಾಗಿ ಅವರ ಚಿಂತನೆಗಳು ಚಲಿಸುತ್ತವೆ.

ನಮ್ಮನ್ನು ಯಾರಾದರೂ ಟೀಕಿಸಿದಾಗ, ಅದನ್ನು ಸ್ವೀಕರಿಸುವುದಕ್ಕೆ ಬದಲಾಗಿ ವೈರಾಗ್ಯವನ್ನು ತೋರ್ಪಡಿಸುತ್ತಾ ಅಳು ಮೋರೆ ಮಾಡುವ ಜನ ಸಾಗರವು ಪ್ರತಿಪಾದಿಸುವುದು ಸ್ವಾರ್ಥವೇ ಅಲ್ಲವೇ.

ಕರ್ಮವೆಂದರೆ ನಾವು ಮಾಡುವ ಕೆಲಸ. ನಮ್ಮ ಕೆಲಸಗಳು ಬುದ್ಧಿ ಮತ್ತು ಭಾವಗಳ ಸಹವರ್ತಿಯಾಗಿರುತ್ತವೆ. ಅದಕ್ಕೆ ಕಲಿಕೆ ಮತ್ತು ಧಾರಣೆಯು ಮಹತ್ವದ ಸಂಗಾತಿಗಳು. ತಿಳುವಳಿಕೆಯಿಲ್ಲದೆ ಮಾಡುವ ಕೆಲಸವು ವ್ಯರ್ಥವೇ ಸರಿ.

ವಾದವು ಯಾವಾಗಲೂ ಆರೋಗ್ಯಕರವಾದ ವಿಚಾರ. ಆದರೆ ವಿತಂಡವಾದವು ಯಾವ ಅಂಶವನ್ನು ಗುರಿ ಮುಟ್ಟಿಸುವುದಿಲ್ಲ. ಬದಲಿಗೆ ಮಾತಿಗೆ ಮಾತು ಬೆಳೆದು ಬಾಂಧವ್ಯ ಅಳಿದೀತು. ಒಣ ಮಾತುಗಳಿಂದ ಫಲವಿಲ್ಲ.

ನಾವು ಕೇಳುವ ಮತ್ತು ನಾವು ನಡೆದುಕೊಳ್ಳುವ ಎರಡರ ನಡುವೆ ಅಗಾಧ ಅಂತರವಿದೆ.

ಹೇಳುವವನ ಅರ್ಥವು ಕೇಳುಗನ ಮನ ಮುಟ್ಟದಿದ್ದರೆ ಅಪಾರ್ಥವಲ್ಲದೇ ಮತ್ತೇನೂ ಸಿದ್ಧಿಸದು.

ಧೀಯುಕ್ತಿಯೊಂದಲ್ಲ ಹೃದ್ಭಕ್ತಿಯೊಂದಲ್ಲ |ಮಾಯೆಯಿಂ ಪರಿದು ತತ್ತ್ವವ ತೋರ್ಪ ಬೆಳಕು ||ಆಯೆರಡು ಕಣ್ಗಳೊಂದಾಗೆ ಮೂರನೆಯ ಕಣ್ |ಗೇಯವನು ಕಂಡೀತೊ ಮರುಳ ...
23/05/2026

ಧೀಯುಕ್ತಿಯೊಂದಲ್ಲ ಹೃದ್ಭಕ್ತಿಯೊಂದಲ್ಲ |
ಮಾಯೆಯಿಂ ಪರಿದು ತತ್ತ್ವವ ತೋರ್ಪ ಬೆಳಕು ||
ಆಯೆರಡು ಕಣ್ಗಳೊಂದಾಗೆ ಮೂರನೆಯ ಕಣ್ |
ಗೇಯವನು ಕಂಡೀತೊ ಮರುಳ ಮುನಿಯ || ೧೭೨

ಧೀ = ಬೆಳಕು, ಜ್ಞಾನ, ಬುದ್ಧಿ.
ಗೇಯ = ಹಾಡಬಹುದಾದ, ಹಾಡು.

ನಮ್ಮ ನೋಟವನ್ನು ಮೀರಿದ ಸತ್ಯವೇ ದೈವ. ಅದನ್ನು ಅರಿವ ಪಥವೇ ಜ್ಞಾನ ಪಥ. ಅದು ಭಕ್ತಿಯ ಪರಾಕಾಷ್ಠೆಯನ್ನು ಹೊಂದಿದೆ. ಅದನ್ನು ಕಾಣಲು ಅಂತರಂಗದ ಮೂರನೆಯ ಕಣ್ಣು ತೆರೆಯಬೇಕಿದೆ.

ಬೆಳಕೆಂದರೆ ಅದು ವಾಚ್ಯವಲ್ಲ, ಅದು ವಾಚ್ಯವೇ ಆಗಿದ್ದರೆ ಬೆಳಕನ್ನು ಕಂಡವರೆಲ್ಲರೂ ದ್ರಷ್ಟ್ರಾರರೇ ಆಗುತ್ತಿದ್ದರು. ಅಂತೆಯೇ ಬುದ್ಧಿಯೂ ವಾಚ್ಯವಲ್ಲ. ಅದು ವಾಚ್ಯವಾಗಿದ್ದರೆ ಒಬ್ಬ ಮೇಷ್ಟರ ಹತ್ತಿರ ಪಾಠವನ್ನು ಕೇಳಿದ ಎಲ್ಲರೂ ಪಂಡಿತರೇ ಅಥವಾ ದಡ್ಡರೇ ಆಗಿರುತ್ತಿದ್ದರು.

ಮಾಯೆಯ ಎಂದರೆ ಅಜ್ಞಾನದ ಮುಸುಕನ್ನು ದೂರ ತಳ್ಳುವ ಸಾಧನೆಯಾದಾಗ ಮಾತ್ರ ಪರತತ್ತ್ವದ ದರ್ಶನವಾದೀತು.
ಅದಕ್ಕೆ ಧೀಯುಕ್ತಿ, ಹೃದ್ಭಕ್ತಿ ಎರಡೂ ಮುಖ್ಯವಾದೀತು.

ಬಯಸಿದ ವಸ್ತುವು ಕೈಗೆ ಸಿಗುವಂತಿದ್ದರೆ ಬಯಕೆಗೇ ಬೆಲೆಯಿರುವುದಿಲ್ಲ. ಧೀಯುಕ್ತಿಯ ಜೊತೆಗೆ ಹೃದ್ಭಕ್ತಿಯ ನೋಟಗಳು ಬೆರೆತರೆ ಅಂತರಂಗದ ಕಣ್ಣನ್ನು ತೆರೆಯುವ ಪ್ರಯತ್ನ ಸಿದ್ಧಿಸುತ್ತದೆ. ಅದು ಸಂಬಂಧಗಳನ್ನು ಬೆಸೆವ ಮಾಧುರ್ಯದ ಗಾನಕಲಾ ವೇದಿಕೆಯಾದೀತು.

ಭಯದಿ ನಿರ್ಭಯವೀವ ದೈವ ಚಿಹ್ನೆಯದೊಂದು |ದಯಿತೆಯೊಳು ಭವದ ಹೊರೆಯ ಪಾಲ್ಗೊಳಲು ||ನಿಯತ ವೃತ್ತಿಯದೊಂದು ದಿನದಿನದ ಭತ್ಯಕ್ಕೆ |ತ್ರಯದೆ ಭಾಗ್ಯವೊ ಬಾಳು...
22/05/2026

ಭಯದಿ ನಿರ್ಭಯವೀವ ದೈವ ಚಿಹ್ನೆಯದೊಂದು |
ದಯಿತೆಯೊಳು ಭವದ ಹೊರೆಯ ಪಾಲ್ಗೊಳಲು ||
ನಿಯತ ವೃತ್ತಿಯದೊಂದು ದಿನದಿನದ ಭತ್ಯಕ್ಕೆ |
ತ್ರಯದೆ ಭಾಗ್ಯವೊ ಬಾಳು ಮರುಳ ಮುನಿಯ || ೧೭೧

ದಯಿತೆ = ನಲ್ಲೆ, ಪತ್ನಿ, ಸಂಗಾತಿ

ಬಾಳು ಹೇಗಿರಬೇಕು, ಹೇಗಿರುತ್ತದೆ, ಎಂಬುದನ್ನು ವಿವರಿಸುತ್ತದೆ ಕಗ್ಗ. ಬಾಳೆಂದರೆ ಭಾಗ್ಯವೇ. ಬದುಕುವುದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅದು ಅನಿವಾರ್ಯ ಕೂಡಾ. ನಮ್ಮ ಬಾಳಿಗೆ ಪೋಷಣೆ ಯಾವುದು? ಪೂರಕ ಯಾವುದು? ನಾವು ಹೇಗಿರಬೇಕು? ಎಂಬುದೂ ಮುಖ್ಯವಾಗುತ್ತದೆ.

ಬಾಳಿನಲ್ಲಿ ಭಾಗ್ಯವಂತರೆನ್ನಿಸಿಕೊಳ್ಳಬೇಕಾದರೆ ಮೂರು ಅಂಶಗಳು ಬಹಳ ಮುಖ್ಯ.
೧. ನಾವು ಭಯಗೊಂಡಾಗ ಆ ಭಯವನ್ನು ಹೋಗಲಾಡಿಸಿ ಅಭಯವನ್ನು ನೀಡುವ ದೈವವು ನಮಗೆ ಬೇಕು.

೨. ದಯಿತೆ ಎಂದರೆ ನಲ್ಲೆ ಹೆಂಡತಿ ಎಂಬುದು ಪ್ರಚಲಿತವಿದ್ದರೂ, ಆ ಪದಕ್ಕೆ ಸಂಗಾತಿ ಎಂಬ ಅರ್ಥವೂ ಇದೆ. ಭವ ಎಂದರೆ ಹುಟ್ಟು. ಇಲ್ಲಿ ಹುಟ್ಟಿದವರು ಭವಿಗಳು. ಭವಿಗಳೆಂದ ಮೇಲೆ ಭವದ ಹೊರೆ ಹೊರಲೇಬೇಕು. ಅದಕ್ಕೆ ಸಂಗಾತಿ ಬೇಕು. ಬಾಳಿನ ನೊಗ ಹೊರಲು ಸಂಗಾತಿಯ ಸಾಂಗತ್ಯ ಅನಿವಾರ್ಯ.

೩. ಬದುಕಿಗೊಂದು ಕಾಯಕ ಬೇಕು. ಕಾಯಕವಿಲ್ಲದ ಬಾಳು ಅರ್ಥಹೀನವಾಗುತ್ತದೆ. ನಮ್ಮ ಸಂಪಾದನೆಯು ಧರ್ಮ ಮಾರ್ಗದಲ್ಲಿ ಇರಬೇಕು ಎಂದರೆ ನಾವು ದುಡಿಯಬೇಕು ಎಂದೇ ಅರ್ಥ. ಬದುಕಲು ಆಹಾರ ಮುಖ್ಯ. ಆಹಾರ ಪಡೆಯಲು ಗಳಿಕೆ ಬೇಕು. ಗಳಿಸಲು ಉದ್ಯೋಗವಿರಬೇಕು. ಖರ್ಚು ಮಾಡಲು ಸಂಪಾದನೆ ಬೇಕಲ್ಲವೇ.

ಈ ಮೂರೂ(ತ್ರಯ) ಇದ್ದರೆ ಅಂದರೆ ಚೆನ್ನಾಗಿದ್ದರೆ ಅಂತಹ ಬಾಳು ನೆಮ್ಮದಿಯ ಬಾಳೆನಿಸುತ್ತದೆ. ಇದೇ ಬಾಳಿನ ಅದೃಷ್ಟ. ಇದು ಎಲ್ಲರಿಗೂ ಲಭ್ಯವಾಗದು. ಸಿಕ್ಕವರು ಭಾಗ್ಯಶಾಲಿಗಳೇ ಸರಿ.

ದುಡಿಮೆ, ಸಂಗಾತಿ, ದೈವಕೃಪೆ ಇವುಗಳನ್ನು ಪಡೆದವನ ಬಾಳು ಸ್ವರ್ಗವೇ ಅಲ್ಲವೇ.

ಕಾಯ ಭೋಗೈಶ್ವರ್ಯ ಯಶಗಳೊಳನಾಸಕ್ತಿ |ನ್ಯಾಯ ಧರ್ಮೋದ್ಧಾರದಲ್ಲಿ ಸಮಸಕ್ತಿ ||ಸ್ವೀಯಾತ್ಮ ಸರ್ವಾತ್ಮವೆನ್ನುವದ್ವಯ ವೃತ್ತಿ |ನೇಯಂಗಳಿವು ನಿನಗೆ ಮರುಳ...
21/05/2026

ಕಾಯ ಭೋಗೈಶ್ವರ್ಯ ಯಶಗಳೊಳನಾಸಕ್ತಿ |
ನ್ಯಾಯ ಧರ್ಮೋದ್ಧಾರದಲ್ಲಿ ಸಮಸಕ್ತಿ ||
ಸ್ವೀಯಾತ್ಮ ಸರ್ವಾತ್ಮವೆನ್ನುವದ್ವಯ ವೃತ್ತಿ |
ನೇಯಂಗಳಿವು ನಿನಗೆ ಮರುಳ ಮುನಿಯ || ೧೭೦

ಕಾಯ= ದೇಹ,
ಭೋಗ= ಸುಖ,
ಐಶ್ವರ್ಯ= ಸಂಪತ್ತು,
ಯಶ= ಕೀರ್ತಿ.
ಸಮಸಕ್ತಿ= ಇಚ್ಛೆ.
ಸ್ವೀಯ = ಸ್ವಂತ.
ಅದ್ವಯ = ಎರಡಲ್ಲದ್ದು. ನೇಯ = ಕ್ರಮ, ನಿಯಮ.

ನಾವು ಯಾವಾಗ ಎಲ್ಲರೊಳಗೊಂದಾಗುತ್ತೇವೋ ಆಗಲೇ ಜೀವನವು ಸಾರ್ಥಕವಾಗುತ್ತದೆ. ಸ್ವಾರ್ಥ ರಹಿತವಾದ ಬಾಳು ಮಾತ್ರ ಉತ್ತಮೋತ್ತಮವೆನಿಸುತ್ತದೆ.

ಮನುಷ್ಯ ಹೇಗಿರಬೇಕು ಎಂಬುದನ್ನು ಕಗ್ಗ ಹೇಳುತ್ತಿದೆ. ಮಾನವೀಯ ಮೌಲ್ಯಗಳು ಮಾತ್ರ ಅದನ್ನು ಗಳಿಸಿಕೊಡಬಲ್ಲವು.

ಜಗದ ಬೆರಗುಗಳಲ್ಲಿ ಮಾಯೆಯ ಮೋಹವೂ ಒಂದು. ಕಂಡದ್ದೆಲ್ಲ ಬೇಕೆನುವ, ಬಂದುದನ್ನು ಇರಲೆನುವ ಭಾವಗಳು ಮಾಯೆಯ ಮೂಲವೆನಿಸುತ್ತವೆ.

ನಮ್ಮ ದೇಹ, ಸುಖ, ಸಂಪತ್ತು, ಕೀರ್ತಿ ಇವು ಶಾಶ್ವತವಲ್ಲ. ಅವು ಯಾವಾಗ ಬೇಕಾದರೂ ಬರಬಹುದು ಹೋಗಬಹುದು. ಜೀವವಿಲ್ಲದ ದೇಹವು ಕಳೇಬರವೆನಿಸುತ್ತದೆ. ಪಾರ್ಥಿವ ಶರೀರವೆನಿಸುತ್ತದೆ.

ಸಂಪತ್ತು ಸಂಪಾದಿಸಿದ್ದು. ಅದು ಮುಂಚೆ ಇರಲಿಲ್ಲ, ಮುಂದೆ ಇರಬೇಕಾಗೂ ಇಲ್ಲ. ಚಂಚಲ ಮೂಲವಾದ ಅದು ಯಾವಾಗ ಬೇಕಾದರೂ ಹೋಗಬಹುದು. ಸುಖವು ತೃಪ್ತಿಯಿಲ್ಲದಿದ್ದರೆ ಮರೀಚಿಕೆಯೆನಿಸುತ್ತದೆ.

ಕೀರ್ತಿ ಹಿಂದೆ ಬಿದ್ದರೆ ಕೀರ್ತಿಶನಿಯನ್ನು ಹೆಗಲಿಗೇರಿಸಿಕೊಂಡಂತೆ. ಅದರಿಂದ ಬಿಡುಗಡೆ ಸುಲಭ ಸಾಧ್ಯವಲ್ಲ.

ಅದಕ್ಕೆ ಬದಲು ನ್ಯಾಯ ಮತ್ತು ಧರ್ಮ ಮಾರ್ಗವನ್ನು ಅನುಸರಿಸಬೇಕು. ಊಟ ಮಾಡುವಾಗ ಪರಿಷೇಚನೆಯ ಸಂದರ್ಭದಲ್ಲಿ ಹೇಳುವ "ಸತ್ಯಂತ್ವರ್ತೇನ ಪರಿಷಿಂಚಾಮಿ" ಎಂಬ ಮಾತು ಇಂದು ನಾ ಉಣ್ಣುವ ಬೋನವು(ಅನ್ನವು) ನಾನು ಸತ್ಯದ ಮಾರ್ಗದಲ್ಲಿ ಸಂಪಾದಿಸಿದ್ದು ಎಂಬ ಅರ್ಥವನ್ನೇ ಕೊಡುತ್ತದೆ. ಅದು ದಿಟವೇ ಆದರೆ ಅವರ ಬಾಳು ಸಾರ್ಥಕ.

ಸ್ವೀಯಾತ್ಮ ಎಂದರೆ ತನ್ನ ಆತ್ಮ. ಅದು ಸರ್ವಾತ್ಮದಂತೆ ಎಂದು ಭಾವಿಸಿದ ದಿನ (ತನ್ನಂತೆ ಪರರ ಬಗೆದ ದಿನ) ದ್ವಯ ಎಂದರೆ ಎರಡು ಒಂದಾಗುತ್ತದೆ. ಎಲ್ಲರೂ ಸಮಾನರು ಎಂಬ ಅಂಶ ಮನವರಿಕೆಯಾಗುತ್ತದೆ.

ಇಂತಹ ಭಾವನೆಗಳು ಮಾನವ ಜೀವನದ ಬುನಾದಿಯಾಗಬೇಕು.

ದ್ವೈತಮದ್ವೈತಂ ವಿಶಿಷ್ಟದದ್ವೈತಮಿವು |ಮಾತೊ ಅನುಭೂತಿಯೋ ಒಳಗರಸಿ ನೋಡು ||ಖ್ಯಾತಿಗಾಯಿತು ತರ್ಕ ವಾಕ್ಯಾರ್ಥಗಳ ಗಡಣೆ |ನೀತಿ ಜೀವಿತಕಿರಲಿ ಮರುಳ ಮು...
20/05/2026

ದ್ವೈತಮದ್ವೈತಂ ವಿಶಿಷ್ಟದದ್ವೈತಮಿವು |
ಮಾತೊ ಅನುಭೂತಿಯೋ ಒಳಗರಸಿ ನೋಡು ||
ಖ್ಯಾತಿಗಾಯಿತು ತರ್ಕ ವಾಕ್ಯಾರ್ಥಗಳ ಗಡಣೆ |
ನೀತಿ ಜೀವಿತಕಿರಲಿ ಮರುಳ ಮುನಿಯ || ೧೬೯

ಗಡಣೆ = ಸಮೂಹ.
ದ್ವೈತ = ಎರಡು.
ಅದ್ವೈತ = ಒಂದು.
ವಿಶಿಷ್ಟಾದ್ವೈತ = ಎರಡೂ ಒಂದರಲ್ಲಿದೆ.

ಮತ ಬೋಧೆಗಳು ಮನವನರಳಿಸಬೇಕು. ಬದುಕಿಗೊಂದು ಸಾರ್ಥಕತೆ ನೀಡಬೇಕು. ದಾರಿದೀಪವಾಗಬೇಕು. ಗಮ್ಯ ಸೇರಲು ನಾವೆಯಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮಂತರಂಗದ ಕಣ್ಣು ತೆರೆಸಬೇಕು.

ತ್ರಿಮತಗಳ ಸಾರಸತ್ತ್ವವು ಇದನ್ನೇ ಬೋಧಿಸುತ್ತದೆ. ಪದಾರ್ಥಗಳ(ಪದ+ ಅರ್ಥಗಳ) ವಿವರಣೆಯು ನಮ್ಮ ಅರಿವಿಗೆ ಎಟುಕಬೇಕಷ್ಟೆ. ಅರಿವಿನ ಮನೆಯ ಬಾಗಿಲು ತಟ್ಟಿದವರಿಗೆ ಅದು ಖಂಡಿತಾ ಲಭಿಸುತ್ತದೆ.

ಅರ್ಥವೆನ್ನುವುದು ವಾಚ್ಯಾರ್ಥ, ಲಕ್ಷ್ಯಾರ್ಥ, ವ್ಯಂಗ್ಯಾರ್ಥಗಳೆಂಬ ಭೇದಗಳನ್ನು ಹೊಂದಿದೆ.
ಕಾವ್ಯ ಮೀಮಾಂಸೆಯಲ್ಲಿ ಒಂದು ಮಾತಿದೆ.
"ಕೇರಿಗೆ ಕೇರಿಯೇ ಕಣ್ಣೀರು ಸುರಿಸಿತು"

ಇಲ್ಲಿ ಕೇರಿ ಕಣ್ಣೀರು ಸುರಿಸಿತು ಎಂಬುದು ವಾಚ್ಯಾರ್ಥವಾದರೆ, ಕೇರಿಯ ಜನ ಕಣ್ಣೀರು ಹಾಕಿದರು ಎಂಬುದು ಲಕ್ಷ್ಯಾರ್ಥ. ಇನ್ನು ಕೇರಿ ಕಣ್ಣೀರು ಸುರಿಸಲು ಸಾಧ್ಯವೇ ಎಂಬುದು ವ್ಯಂಗ್ಯಾರ್ಥ.

ಹಾಗೇ ತ್ರಿಮತಗಳ ಬೋಧನೆಯನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕೆಂಬುದರ ಸೂಚನೆಯೂ ಇಲ್ಲಿದೆ.

ಇಲ್ಲದಿದ್ದರೆ ನೀತಿಯು ಮಾತಾಗಿ ಬಿಡುತ್ತದೆ. ಅನುಭೂತಿಯನ್ನು ಪಡೆಯಲು ನಾವು ಒಳಗನ್ನು ಆಶ್ರಯಿಸಬೇಕಾಗುತ್ತದೆ.

ಕೇವಲ ತರ್ಕ, ವಾದ, ವಾಕ್ಯ, ಅರ್ಥಗಳ ಗುಂಪನ್ನು ಗೋಜಲಾಗಿಸಿ ಹೇಳಿದರೆ ಯಾವ ಅನುಕೂಲವೂ ಆಗದು. ಬದಲಿಗೆ ವಿಪರೀತವಾದೀತು.

ಮಾತಿಗೊಂದು ಅರ್ಥ ಬೇಕೆ? ಅರ್ಥವಿದ್ದರರ್ಥ ಸಾಕೆ, ಮೋಡಗಳನು ನೋಡಿ ಕಲಿ, ಅರ್ಥ ಅಲ್ಪವೆಂದು ತಿಳಿ - ಕುವೆಂಪು ರವರ ದಿಗಂತ ಕವಿತೆಯ ಸಾಲು ನೆನಪಾಗುತ್ತದೆ.

ಜೀವನಕ್ಕೆ ಬೇಕಾದುದು ನೀತಿ ಅದನ್ನು ಎಲ್ಲೆಡೆಯಿಂದ ಪಡೆಯೋಣ.

ದ್ವೈತಂ ವಿಶಿಷ್ಟದದ್ವೈತಮದ್ವೈತಮಿವು |ಮಾತೊ ಬರಿದಹ ಮಾತೊ ನಿನಗೆ ಹೃದಯಾನು ||ಭೂತಮಿಹ ವಾರ್ತೆಯೋ ಜೀವನೀತಿಯ ತೋರ್ಪ |ಜ್ಯೋತಿಯೋ ಜೀವನದಿ ಮರುಳ ಮುನ...
18/05/2026

ದ್ವೈತಂ ವಿಶಿಷ್ಟದದ್ವೈತಮದ್ವೈತಮಿವು |
ಮಾತೊ ಬರಿದಹ ಮಾತೊ ನಿನಗೆ ಹೃದಯಾನು ||
ಭೂತಮಿಹ ವಾರ್ತೆಯೋ ಜೀವನೀತಿಯ ತೋರ್ಪ |
ಜ್ಯೋತಿಯೋ ಜೀವನದಿ ಮರುಳ ಮುನಿಯ || ೧೬೮

ಅದ್ವೈತ = ಶಂಕರಾಚಾರ್ಯರು ಪ್ರತಿಪಾದಿಸಿದ ಮತ.(ಬ್ರಹ್ಮ ಸತ್ಯಾ, ಜಗನ್ಮಿಥ್ಯಾ)
ದ್ವೈತ = ಮಧ್ವಾಚಾರ್ಯರು ಪ್ರತಿಪಾದಿಸಿದ ಮತ. (ಜೀವಾತ್ಮ ಮತ್ತು ಪರಮಾತ್ಮ ಭಿನ್ನ)
ವಿಶಿಷ್ಟಾದ್ವೈತ= ರಾಮಾನುಜಾಚಾರ್ಯರು ಪ್ರತಿಪಾದಿಸಿದ ಮತ. (ಜೀವಾತ್ಮನು ಪರಮಾತ್ಮನ ಅಧೀನ)

ಅನುಭೂತ (ಅನುಭೂತಿ) = ಅನುಭವ ವೇದ್ಯವಾದ.

ತ್ರಿಮತಾಚಾರ್ಯರು ಬೋಧಿಸಿದ ತತ್ತ್ವಗಳನ್ನು ಅರ್ಥ ಮಾಡಿಕೊಂಡವರೆಷ್ಟು ಮಂದಿ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಅಷ್ಟು ಸುಲಭದ ವಿಷಯವಲ್ಲ.

ಯಾರಿಗೆ ಎಷ್ಟು ಲಾಭವೋ ಅಷ್ಟನ್ನು ಮಾತ್ರ ಪಡೆಯುತ್ತಾರೆ. ಧರ್ಮವು ಸಾಗರ. ನಮ್ಮ ಬೊಗಸೆಯಿಂದ ಎಷ್ಟನ್ನು ಪಡೆಯಲಾದೀತು.

ಎಲ್ಲ ಧರ್ಮಗಳ ಸಾರವೂ ಸಾಕ್ಷಾತ್ಕಾರದ ಅನುಭವವನ್ನೇ ನೀಡುತ್ತವೆ.

ಆದರೆ ಧರ್ಮವನ್ನು ಅರ್ಥಮಾಡಿಕೊಳ್ಳದವರೇ ಹೆಚ್ಚು. ಅವರನ್ನು ಪ್ರಚೋದಿಸುವರ ಸಂಖ್ಯೆಯೂ ಹೆಚ್ಚು.

ಅಂತಹವರನ್ನು ಕುರಿತು ಡಿವಿಜಿ ಈ ಕಗ್ಗದಲ್ಲಿ ಪ್ರಶ್ನಿಸುತ್ತಾರೆ. ಆದರೆ, ಅದಕ್ಕೆ ಉತ್ತರ - ಸರಿಯಾದ ರೀತಿಯಲ್ಲಿ ಪಡೆಯಬೇಕಿದೆ.

ಮೂರೂ ಮತಧರ್ಮಗಳು ಮಾನವನಿಗೆ ಮಾತಿನಂತೆ ಭಾಸವಾಗುತ್ತವೆಯೇ? ಅಥವಾ ಬರಿಯ ಮಾತೇ ಆಗಿದೆಯೇ, ಮಾನವನ ಹೃದಯದಲ್ಲಿ ಅನುಭವದ ಸಾರವನ್ನು ಹೇಳುವ ಅನುಭೂತಿಯೇ? ತಿಳಿಯದು.

ಅದೊಂದು ವಾರ್ತೆಯೋ, ಜೀವನದಲ್ಲಿ ಬದುಕುವ ಮಾರ್ಗವನ್ನು ಸೂಚಿಸುವ ಅಥವಾ ಅಂಧಕಾರದ ಬಾಳಿನಲ್ಲಿ ದಾರಿದೀಪವಾಗುವ ಬೆಳಕೋ ಎಂದು ಕೇಳುತ್ತಾರೆ.

ಅಂದರೆ, ಮತಧರ್ಮಗಳು ನಮಗೆ ಮಾಡಬೇಕಾದುದು ಏನು ಎಂಬುದಕ್ಕೆ ಉತ್ತರ ದಕ್ಕಿತಲ್ಲವೇ. ಬಾಳಿನ ಅರ್ಥವನ್ನು ತೋರಿಸುವ ಬೆಳಕಾದಾಗ ಮತಧರ್ಮಗಳು ಮಾನವರಿಗೆ ಆತ್ಮೋದ್ಧಾರದ ವಾಹಕಗಳಾಗುತ್ತವೆ.

ಗುಣ ಬೇರೆ ಬಲ ಬೇರೆ ಗುರಿ ಬೇರೆ ರುಚಿ ಬೇರೆ |ಋಣ ಸೂತ್ರ ಗತಿ ಬೇರೆ ಪೂರ್ವಕಥೆ ಬೇರೆ ||ಮನುಜ ಮನುಜಂಗಮಿಂತಾತ್ಮ ಯೋಗ್ಯತೆ ಬೇರೆ |ಅನುವರಿಯೆ ಸಾರ್ಥ...
17/05/2026

ಗುಣ ಬೇರೆ ಬಲ ಬೇರೆ ಗುರಿ ಬೇರೆ ರುಚಿ ಬೇರೆ |
ಋಣ ಸೂತ್ರ ಗತಿ ಬೇರೆ ಪೂರ್ವಕಥೆ ಬೇರೆ ||
ಮನುಜ ಮನುಜಂಗಮಿಂತಾತ್ಮ ಯೋಗ್ಯತೆ ಬೇರೆ |
ಅನುವರಿಯೆ ಸಾರ್ಥಕ್ಯ ಮರುಳ ಮುನಿಯ || ೧೬೭

ಅನುವರಿಯೆ = ಕ್ರಮವನ್ನು ತಿಳಿಯಲು.

ಮಾನವ ಜನ್ಮ ದೊಡ್ಡದು ಎಂಬುದು ಎಷ್ಟು ಸತ್ಯವೋ ಅದು ವೈವಿಧ್ಯಪೂರ್ಣವಾದುದು ಎಂಬುದೂ ಅಷ್ಟೇ ಸತ್ಯ. ಸಕಲ ಜೀವರಾಶಿಗಳಲ್ಲಿ ಒಂದರಂತೆ ಮತ್ತೊಂದು ಇಲ್ಲ. ಹಾಗೆಯೇ ಮನುಕುಲದ ಜನರೂ ವಿಭಿನ್ನವೇ ಸರಿ.

ಜಗತ್ತಿನ ಎಲ್ಲ ಕಡೆಗಳಿಂದ ಅಥವಾ ಒಂದು ದೇಶದ ವಿವಿಧ ಪ್ರದೇಶಗಳಿಂದ ಜನರನ್ನು ಕರೆಸಿ ಒಗ್ಗೂಡಿಸಿ ನೋಡಿದರೆ ಪ್ರತಿಯೊಬ್ಬರ ಸಂಸ್ಕೃತಿಯೂ ಪ್ರತ್ಯೇಕವೇ ಆಗಿರುತ್ತದೆ.

ಒಬ್ಬರ ಗುಣದಂತೆ ಮತ್ತೊಬ್ಬರ ಗುಣವಿರಲಾರದು. ಬಲವು ಎಂದಿಗೂ ಸಮಾನವಾಗಿರದು. ಅವರವರ ಶಕ್ತಿಗನುಸಾರವಾಗಿ ಅವರ ಬೆಳವಣಿಗೆ ಇರುತ್ತದೆ.

ಎಲ್ಲರ ಗುರಿ ಒಂದೇ ಆಗಿರುವುದಿಲ್ಲ. ಒಂದು ಶಾಲೆಯ ಮಕ್ಕಳ ಆಸೆಯನ್ನು ಕೇಳಿದರೆ ಪ್ರತಿಯೊಬ್ಬರೂ ತಮ್ಮದೇ ಆಕಾಂಕ್ಷೆ ಹೊಂದಿರುತ್ತಾರೆ.

ಅಭಿರುಚಿಯು ಸಂಪೂರ್ಣವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅವರವರ ಕಣ್ಣಂತೆ ದೃಷ್ಟಿಯೂ ಬೇರೆ, ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ - ದಿನಕರದೇಸಾಯಿ.

ಋಣವು ಮನುಜರ ಹಾಗೆಯೇ ಬದಲಾಗುವ ವಿಷಯ. ಅವರವರ ಅವಶ್ಯಕತೆಗೆ ತಕ್ಕಂತೆ ಅವರ ಮೇಲಿನ ಋಣವು ಬದಲಾಗುತ್ತದೆ. ಗಮ್ಯವನ್ನು ಮುಟ್ಟುವ ರೀತಿಯೂ ಬೇರೆಯೇ.

ಒಬ್ಬೊಬ್ಬರದೂ ವಿಭಿನ್ನ ಕತೆಯೇ. ಯೋಗ್ಯತೆಯಿದ್ದಷ್ಟೆ ಬೆಲೆ. ಆತ್ಮೋದ್ಧಾರದ ಹಾದಿಯೂ ಭಿನ್ನವಾಗಿಯೇ ಕಾಣುತ್ತದೆ.

ಆದ್ದರಿಂದ ಬದುಕಿನ ಕ್ರಮವರಿತು ಬಾಳಿದರೆ ಸಾರ್ಥಕತೆ ತಾನಾಗಿಯೇ ಕೈ ಹಿಡಿಯುತ್ತದೆ.

ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ |ಧುರರಂಗಮಮವರೀರ್ವರಿಗೆ ಮರ್ತ್ಯ ಹೃದಯ ||ತೆರೆಮರೆಯೊಳಿರುತವರು ಸಭ್ಯವೇಷದ ಭಟರ |ಹರಿಬ ತಿಳಿಸುವುದುಂಟು ಮರ...
17/05/2026

ಅರೆದೈವವರೆದೈತ್ಯ ನರನೆನಿಪ್ಪ ವಿಚಿತ್ರ |
ಧುರರಂಗಮಮವರೀರ್ವರಿಗೆ ಮರ್ತ್ಯ ಹೃದಯ ||
ತೆರೆಮರೆಯೊಳಿರುತವರು ಸಭ್ಯವೇಷದ ಭಟರ |
ಹರಿಬ ತಿಳಿಸುವುದುಂಟು ಮರುಳ ಮುನಿಯ || ೧೬೬

ಧುರ = ಯುದ್ಧ.
ಹರಿಬ= ಸಂಚು, ಹೊಂಚು.

ದೇವತೆಗಳು ಮತ್ತು ರಾಕ್ಷಸರು ಇಬ್ಬರೂ ಪರಮ ವೈರಿಗಳು. ಅವರಿಬ್ಬರ ಮಧ್ಯೆ ಒಣ ಹುಲ್ಲು ಬಿದ್ದರೂ ಹೊತ್ತಿ ಉರಿಯದೇ ಇರದು. ಮನುಷ್ಯನು ದೈವೀ ಮತ್ತು ರಕ್ಕಸಗುಣಗಳ ಮಿಶ್ರಣ. ಅವನಲ್ಲಿ ದೈವತ್ವವೂ ಇದೆ. ಮೃಗೀಯ ಭಾವವೂ ಇದೆ.

ಅಂದರೆ ಮನುಜನು ಅರೆದೈವ ಮತ್ತು ಅರೆದೈತ್ಯನೆಂದಾಯ್ತು. (ದೇವತೆಗಳು ಮತ್ತು ರಕ್ಕಸರಿಗೆ ಹೊರತಾದ ಮಾನವರನ್ನು ಸೃಷ್ಟಿಸಿದ ಉದ್ದೇಶವೇ ಏಕತಾನತೆಯನ್ನು ತಪ್ಪಿಸಲು.)

ಆದ್ದರಿಂದಲೇ ನರನೆಂಬ ಪ್ರಾಣಿ ಸುರಾಸುರ ಗುಣಗಳ ಒಡೆಯ. ಸಾತ್ವಿಕ ಮತ್ತು ತಾಮಸ ಗುಣಗಳ ಮೇಲಾಟ ಸದಾ ಮಾನವನ ಎದೆಯಲ್ಲಿ ನಡೆಯುಯುತ್ತಲೇ ಇರುತ್ತದೆ.

ಮಾನವನ ಹೃದಯವೇ ದೇವತೆಗಳು ಮತ್ತು ರಕ್ಕಸರ ರಣರಂಗ. ವಿಜಯದ ಮಾಲೆ ತೂಗಾಡುವಂತೆ, ಮಾನವ ಹೃದಯವೂ ಅನಿಶ್ಚಿತವಾದ ಭಾವ ಸಾಗರದಲ್ಲಿ ಮುಳುಗಿರುತ್ತದೆ.

ಅವರು ಮೇಲ್ನೋಟಕ್ಕೆ ಕಾಣಿಸರು. ಮಾನವರು ತಮ್ಮ ಒಳಗುಟ್ಟನ್ನು ಬಿಡದೆ ಸಭ್ಯವೇಷದಿಂದ ಜಗದ ಕಣ್ಣಿಗೆ ಮಣ್ಣೆರಚಿದರೂ, ಆಗಾಗ ಅವರ ದುರ್ಗುಣಗಳನ್ನು ಬೆಳಕಿಗೆ ತರುವ ಕೆಲಸವು ಸುರಾಸುರರದ್ದೇ ಆಗಿದೆ.

ಒಳ್ಳೆಯವನೊಳಗಣ ಕೆಟ್ಟತನ, ಕೆಟ್ಟವನ ಎದೆಯಾಳದ ಒಳ್ಳೇಗುಣಗಳು ಕಾಲಾನು ಕ್ರಮದಲ್ಲಿ ಗುರುತಿಸಲ್ಪಡುತ್ತವೆ.

ಆದ್ದರಿಂದ ಸಹಜವಾಗಿ ಬದುಕೋಣ ಮತ್ತು ಇತರರನ್ನೂ ಬದುಕಲು ಬಿಡೋಣ.

Address

Hosaholalu
Krishnarajapet
571426

Telephone

+919008820892

Website

Alerts

Be the first to know and let us send you an email when ಈ ಮನಸು posts news and promotions. Your email address will not be used for any other purpose, and you can unsubscribe at any time.

Contact The Business

Send a message to ಈ ಮನಸು:

Share

Category