07/06/2025
ಪ್ರಚುರಂ ಪತ್ತೊಳಗಾಗೆರಂಧ್ರವನೆ ಕೈಗೊಂಡೆಂಟನಿಗೇಳ ಬಿ |
ಟ್ಟುಚಿತಂ ತಾನೆನಿಪಾರ ಕಟ್ಟುತೈಗದಕ್ಕೀಡಾಗದೇ ನಾಲ್ವರಂ |
ರಚನಂಗೈಯದೆ ಮೂರನಂಬದೆರಡಂ ಬಿಟ್ಟೊಂದರೊಳ್ ನಿಲ್ಲದಾ |
ವಚನ ಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧೦೧||
ಪದವಿಭಾಗ
ಪತ್ತೊಳಗಾಗೆ = ಪತ್ತು + ಒಳಗಾಗೆ
ಕೈಗೊಂಡೆನೆಂಟನೀಗೇಳ = ಕೈ + ಕೊಂಡೆನು+ ಎಂಟನು+ಈಗ + ಏಳ
ಕಟ್ಟುತೈಗದಕ್ಕೀಡಾಗದೆ = ಕಟ್ಟುತ+ ಐಗದಕ್ಕೆ+ ಈಡಾಗದೆ
ಮೂರನಂಬದೆರಡಂ= ಮೂರ+ ನಂಬದೆ+ ಎರಡಂ
ಕಠಿಣ ಪದಗಳ ಅರ್ಥ
ಪತ್ತು = ಇಂದ್ರಿಯಗಳು
ರಂಧ್ರ= ನವರಂಧ್ರ
ಎಂಟು = ಅಷ್ಟಮದ
ಏಳು= ಏಳು ವ್ಯಸನಗಳು
ಆರು = ಷಡ್ಗುಣ
ಐದು= ಪಂಚಶರ
ನಾಲ್ಕು= ಪುರುಷಾರ್ಥ
ಮೂರು= ಆಸೆಗಳು
ಎರಡು= ನೋವು ನಲಿವು
ಒಂದು= ಬ್ರಹ್ಮ
ಅರ್ಥ
ಆಚರಣೆಯಲ್ಲಿರದ ಜ್ಞಾನವು ಮಾತಲ್ಲಿರಬಾರದು. ಹತ್ತು ಇಂದ್ರಿಯಗಳನ್ನು ನಿಗ್ರಹಿಸಿ. ನವರಂಧ್ರಗಳ ನಿಯಂತ್ರಿಸಿ, ಅಷ್ಟ ಮದಗಳನರಿತು, ಸಪ್ತವ್ಯಸನವ ದೂರಾಗಿಸಿ, ಷಡ್ಗುಣಗಳ ಬಲಿಸಿ, ಪಂಚಬಾಣಗಳ ತಪ್ಪಿಸಿ, ಪುರುಷಾರ್ಥ ಪಡೆಯದ, ಆಶಾತ್ರಯಗಳನ್ನು ಗೆಲ್ಲದ, ಸುಖ ದುಃಖಗಳ ಸಮಾನತೆಯಲ್ಲಿ ಕಾಣದ, ಬ್ರಹ್ಮನಲ್ಲಿ ಮನ ನೆಲೆಸದ ಜನರಿಗೆ ಮುಕ್ತಿ ದೊರಕದು.
ವಿವರಣೆ
ಈ ಶತಕವು ವಿಶಿಷ್ಡವಾಗಿದೆ. ಸಂಖ್ಯಾ ಚಮತ್ಕಾರಗಳನ್ನು ಮಾಡುತ್ತದೆ. ಹತ್ತರಿಂದ ಒಂದರವರೆಗಿನ ಲೆಕ್ಕದಲ್ಲಿ ಹೊಸ ಜಾದೂವನ್ನು ಹೇಳುತ್ತದೆ.
ಹತ್ತು ಇಂದ್ರಿಯಗಳೆಂದರೆ, ಐದು ಜ್ಞಾನೇಂದ್ರಿಯಗಳು
ಐದು ಕರ್ಮೇಂದ್ರಿಯಗಳು.
ಮೊದಲ ಐದು ಪಂಚೇಂದ್ರಿಯಗಳು. ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ.
ನಂತರದ ಐದು ಕರ್ಮಕ್ಕೆ ಸಂಬಂಧಿಸಿದ್ದು. ವಾಕ್, ಪಾಣಿ, ಪಾದ, ಪಾಯು, ಉಪಸ್ಥಗಳು. ವಾಕ್, ಬೇಕು ಬೇಡಗಳನ್ನು ಹೇಳುವ, ಪಾಣಿ - ತಾಡನ ಮುಂತಾದುವನ್ನು ಮಾಡುವ, ಪಾದ - ನಿರ್ಗಮನಾಗಮನಗಳನ್ನು ಮಾಡುವ, ಪಾಯು - ಅಪಾನ ಮಲಗಳನ್ನು ವಿಸರ್ಜಿಸುವ, ಉಪಸ್ಥ - ಜನನೇಂದ್ರಿಯ.
ಹೀಗೆ ಕರಣಗಳ ಮೂಲಕ ಕರ್ಮ ಪ್ರಚೋದನೆ ಮಾಡುವ ಇವುಗಳನ್ನು ಹಿಡಿತದಲ್ಲಿಡಬೇಕು.
ನವರಂಧ್ರಗಳು
ಕಣ್ಣು ೨, ಕಿವಿ ೨, ಮೂಗು ೧, ಬಾಯಿ ೧, ನಾಭಿ ೧, ಮಲ ಮೂತ್ರ ದ್ವಾರಗಳು. ಇವುಗಳನ್ನು ಮುಚ್ಚುವುದೆಂದರೆ ದೇಹತ್ಯಾಗವೇ.
ಅಷ್ಟಮದ
ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ ಮತ್ತು ಅಧಿಕಾರ. ಇವುಗಳನ್ನು ಅರಿಯುವುದು.
ಸಪ್ತವ್ಯಸನಗಳು
ಇದರಲ್ಲಿ ಕೋಪದಿಂದ ಹುಟ್ಟುವ ಮೂರು, ಮಾತು, ನಿಂದೆ ದಂಡನೆ. ಕಾಮದಿಂದ ಹುಟ್ಟುವ ನಾಲ್ಕು, ಬೇಟೆ, ಜೂಜು, ಹೆಣ್ಣು, ಪಾನಗಳು. ಇವನ್ನು ಬಿಡಬೇಕು.
ಷಡ್ಗುಣಗಳು
ಕ್ಷಮೆ, ದಯೆ, ಶಾಂತಿ, ಸೈರಣೆ, ಸತ್ಯ ಮತ್ತು ನಿತ್ಯ ಇವನ್ನು ನಮ್ಮ ಹಿಡಿತದಲ್ಲಿಡಬೇಕು.
ಪಂಚಬಾಣಗಳು
ಅರವಿಂದ, ಚೂತ, ಅಶೋಕ, ನವಮಲ್ಲಿಕಾ, ನೀಲೋತ್ಫಲ. ಇವುಗಳ ಸೆಳೆತಕ್ಕೆ ಸಿಗಬಾರದು.
ಪುರುಷಾರ್ಥಗಳು
ಧರ್ಮ, ಅರ್ಥ, ಕಾಮ, ಮೋಕ್ಷಗಳು ಇವನ್ನು ಗಳಿಸಬೇಕು.
ಅವಸ್ಥಾತ್ರಯಗಳು
ಇವು ಆಶಾಮೂಲಗಳು. ಸ್ವಪ್ನ, ಜಾಗೃತ, ಸುಷುಪ್ತಿ. ಇಲ್ಲಿ ಆರಾಮವಾಗಿ ಅನುಭವಿಸಬೇಕು. ಸುಖ ಮತ್ತು ದುಃಖಗಳನ್ನು ಸಮಾನವಾಗಿ ಕಾಣಬೇಕು. ಬ್ರಹ್ಮ ಒಂದೆಂದು ತಿಳಿದು ಅವನಲ್ಲಿ ಲೀನವಾಗಬೇಕು.
ಇವುಗಳನ್ನು ಮಾಡದೇ ಬರಿಮಾತಿನಿಂದ ಮುಕ್ತಿ ಸಿಗದು.