01/01/2026
"Murder of Mahatma" ಎಂಬ ಪುಸ್ತಕವನ್ನು ನಾಥೂರಾಮ ಗೋಡ್ಸೆಯವರಿಗೆ ಮರಣ ದಂಡನೆ ವಿಧಿಸಿದ ಮೂವರು ನ್ಯಾಯಮೂರ್ತಿಗಳ ಪೈಕಿ ಒಬ್ಬರಾದ ಜಿ.ಡಿ. ಖೋಸ್ಲಾ ಬರೆದಿದ್ದರು. ಅದರಲ್ಲಿ ಅವರು ಸವಿಸ್ತಾರವಾದ ಅಧ್ಯಾಯವನ್ನು ಬರೆದಿದ್ದರು. ಗಾಂಧೀಜಿಯವರನ್ನು ಅವರು ಭೇಟಿಯಾಗಿದ್ದು, ಅನಂತರ ನಾಥೂರಾಮ್ ಗೋಡ್ಸೆಯವರು ಅವರೆದುರಿಗೆ ಸಿಮ್ಲಾದ ನ್ಯಾಯಾಲಯದಲ್ಲಿ ಆರೋಪಿಯಾಗಿ ನಿಂತಿದ್ದು, ತಮ್ಮ ಕೇಸನ್ನು ತಾವೇ ವಾದಿಸಿಕೊಂಡಿದ್ದು, ಅವರಿಗೆ ನ್ಯಾಯಮೂರ್ತಿಗಳು ಮರಣದಂಡನೆ ನೀಡಿದ್ದು, ಜೈಲಿನಲ್ಲಿ ನಾಥೂರಾಮ್ ಗೋಡ್ಸೆಯವರು ಕಳೆದ ಕೊನೆಯ ದಿನಗಳ ವಿವರಣೆ, ಕೊನೆಗೆ ನಾಥೂರಾಮರನ್ನೂ ಮತ್ತು ಅವರ ಮಿತ್ರ ನಾರಾಯಣ ದತ್ತೋಪಂತ ಆಪ್ಟೆಯವರನ್ನೂ ನೇಣಿಗೇರಿಸಿದ್ದೂ - ಇವೆಲ್ಲವುಗಳ ಬಗ್ಗೆ ನ್ಯಾಯಮೂರ್ತಿ ಜಿ.ಡಿ. ಖೋಸ್ಲಾ ಬೆವರು ಬೆವರಾಗಿ ಬೆರೆದಿದ್ದರು. ಒಮ್ಮೆ ಅದನ್ನು ಓದಿ ಸುಮ್ಮನಾಗಿದ್ದೆ.
ಅನಂತರ ಓದಿದ್ದು ಖ್ಯಾತ ವಕೀಲ ಹಾಗು ಪತ್ರಕರ್ತ ತಪನ್ ಘೋಷ್ ಬರೆದ - "Gandhi Murder Trial" ಎಂಬ ಪುಸ್ತಕ. ಅಷ್ಟು ಹಳೆಯ ಪುಸ್ತಕವನ್ನು ನನಗೋಸ್ಕರ ಅಕ್ಕರೆಯಿಂದ ಝೆರಾಕ್ಸ್ ಮಾಡಿಸಿ ಕಳಿಸಿದ ಪೊಲೀಸ್ ಅಧಿಕಾರಿ ಮಿತ್ರರ ಹೆಸರು ಉಡಿಕೇರಿ. ಈ ಮಧ್ಯೆ ಗೋಡ್ಸೆಯವರ ಬಗ್ಗೆ, ವೀರ ಸಾವರ್ಕರರ ಬಗ್ಗೆ ಅಲ್ಲಲ್ಲಿ ಓದಿಕೊಂಡಿದ್ದೆ. ಆದರೆ ತಪನ್ ಘೋಷ್ ಬರೆದ ಪುಸ್ತಕ ಓದುವ ತನಕ ನನಗೆ ಗಾಂಧೀಜಿ ಮತ್ತು ಗೋಡ್ಸೆಯವರ ವ್ಯಕ್ತಿತ್ವಗಳು ಇಡಿಇಡಿಯಾಗಿ ಕೈಗೆ ಸಿಕ್ಕಿರಲಿಲ್ಲ. ಎರಡನ್ನೂ ಓದಿದ ಮೇಲೆ ಇನ್ನೊಂದಿಷ್ಟು ಪುಸ್ತಕಗಳನ್ನು ತಂದಿಟ್ಟುಕೊಂಡು ಓದಿದೆ. ಒಂದು ಕಡೆಯಿಂದ ನೋಟ್ಸ್ ಮಾಡುತ್ತಾ ಹೋದೆ. ಮುಂದೆ ಗೋಡ್ಸೆಯವರ ಬಗ್ಗೆ, ಗಾಂಧೀಜಿಯ ಹತ್ಯೆಯ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇನೆ ಅಂತ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ ನೋಡೀ!! ಪಾತ್ರಗಳ ಸುರಿಮಳೆ ಆರಂಭವಾಯಿತು. "ಗಾಂಧೀ ಹತ್ಯೆ" ಲೇಖನ ಮಾಲಿಕೆ ಆರಂಭವಾದ ಮೇಲಂತೂ ಪತ್ರಿಕೆಗಳೇ ಸಿಡಸಿಡಾ ಅಂತ ಪ್ರತಿಕ್ರಿಯಿಸತೊಡಗಿದವು. ಕೆಲವರು ನನ್ನನ್ನು ಆರೆಸ್ಸೆಸ್ಸಿಗ ಅಂದರು. ಗಾಂಧೀ ವಿರೋಧಿ ಅಂದರು. ಗೋಡ್ಸೆಯವರನ್ನು ವಿಜೃಂಭಿಸಿ ಬರೆಯುತ್ತಿದ್ದೀಯ ಎಂದರು. ನಕ್ಕು ಸುಮ್ಮನಾದೆ.
ನಮ್ಮ ನಾಡಿನ ಕೆಲವು ವಿವಾದಗ್ರಸ್ತ ಚಿಂತನೆಗಳ ಪೈಕಿ ಈ ಗಾಂಧಿ - ಗೋಡ್ಸೆ ಕುರಿತಾದ ಚಿಂತನೆಯೂ ಒಂದು. ಅದು ಇಂದು ನೆನ್ನೆಯದೇನಲ್ಲ. ಭಾರತ ದೇಶದ ಮಹಾಕಾವ್ಯಗಳ(epic ಗಳ) ಕಾಲದಿಂದಲೂ ಇಂಥ ದುರಂತ ಸಂಭವಿಸುತ್ತಾ ಬಂದಿದೆ. ಪುರಾಣ ಕಾಲದಿಂದಲೂ ನಾವು ಒಂದು ಒಳ್ಳೇ ಮತ್ತು ಕೆಟ್ಟ ಕ್ಯಾರೆಕ್ಟರುಗಳ ಪರಿಕಲ್ಪನೆಯನ್ನು ಇಟ್ಟುಕೊಂಡು ಬರೆಯುತ್ತಾ, ಓದುತ್ತಾ ಬಂದಿದ್ದೇವೆ. ನಮ್ಮ ಕಣ್ಣಿಗೆ ಕುದುರೆಗೆ ಕಟ್ಟುವಂತಹಾ ಕಣ್ಕಾಪು ಕಟ್ಟಲಾಗಿದೆ. ಯಾವ ಬರಹದಲ್ಲೂ ನಾವು ಈ ಕಾಂಟ್ರಾಸ್ಟ್ ಪಾತ್ರಗಳ ಹೊರತಾಗಿ ಮತ್ತೊಂದು ಸ್ವಭಾವದ ವ್ಯಕ್ತಿತ್ವವನ್ನು ಒಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ಧರಿರುವುದಿಲ್ಲ.
ಆದರೆ. ತಮಾಷೆ ನೋಡೀ, ನಾವು ರಾಮನಷ್ಟು ಒಳ್ಳೆಯವರೂ ಅಲ್ಲ- ರಾವಣನಷ್ಟು ಕೆಟ್ಟವರೂ ಅಲ್ಲ!! ನಾವು ಗಾಂಧಿಯ ಸ್ವಭಾವವನ್ನು ರೂಢಿಸಿಕೊಂಡು ಬದುಕುವುದಿಲ್ಲ, ಗೋಡ್ಸೆಯವರಂತೆ ಸಾಯಲಿಚ್ಛಿಸುವುದಿಲ್ಲ ಮತ್ತು ಅವರಂತೆ ಬದುಕಲೂ ಸಿದ್ದರಿಲ್ಲ. ನಮ್ಮ ಕಲ್ಪನೆಯಲ್ಲಿ ಗಾಂಧೀಜಿ ತುಂಬಾ ಒಳ್ಳೆಯವರು, ಶಾಂತಿ ದೂತ, ಹೋರಾಟಗಾರ, ಸತ್ಯದ ಪಕ್ಷಪಾತಿ, ನ್ಯಾಯದ ಸ್ಥಿರ ಮೂರ್ತಿ. ಅಂಥವರನ್ನು ಕೊಂದ ನಾಥೂರಾಮ ಗೋಡ್ಸೆ ಕೆಟ್ಟವನು, ಉನ್ಮಾದಿ, ಶಾಂತಿ ಸಿದ್ದಾಂತ ವಿರೋಧಿ. ಅದರ ಆಚೆಗೆ ಅವರ ಬಗ್ಗೆ ನಮಗೆ ಏನೂ ಗೊತ್ತಿಲ್ಲ!!
ಗೊತ್ತು ಮಾಡಿಕೊಳ್ಳಲು ನಾವು ಸಿದ್ದರೂ ಇಲ್ಲ. ಕುದುರೆಗೆ ಕಟ್ಟುವಂತಹಾ ಕಣ್ಕಾಪು ಕಟ್ಟಿಕೊಂಡೇ ಬೆಳೆದಿದ್ದೆವಾದ್ದರಿಂದ ನಾಥೂರಾಮ ಗೋಡ್ಸೆಯವರಲ್ಲಿ ಯಾರಾದರೂ ಒಂಚೂರು ಪಾಸಿಟಿವ್ ಆದ ಗುಣಗಳಿದ್ದವು ಅಂತ ಬರೆದ ತಕ್ಷಣ, ಅವರು ನಮ್ಮ ಕಣ್ಣಿಗೆ ಆರೆಸ್ಸೆಸ್ಸಿಗರಾಗಿ, ಮತಾಂಧ ಹಿಂದೂ ಆಗಿ, ಶಾಂತಿ ಸಿದ್ದಾಂತದ ವಿರೋಧಿಯಾಗಿ, ಗಾಂಧೀ ದ್ರೋಹಿಯಾಗಿ ಕಂಡು ಬಿಡುತ್ತಾರೆ. ಅದರಲ್ಲೂ ಗೋಡ್ಸೆಯವರ ಬಗ್ಗೆ ಪಾಸಿಟಿವ್ ಆಗಿ ಮಾತಾಡುತ್ತಿದ್ದಂತೆಯೇ, ಅವರು ಏನು ಮಾತಾಡುತ್ತಿದ್ದರೆ ಎಂಬುದು ಅರ್ಥವಾಗುವ ಮೊದಲೇ ನಮ್ಮ ಅರೆಬೆಂದ ಕಮ್ಮ್ಯುನಿಷ್ಟರು, ಸೋಷಲಿಸ್ಟರು, ಅವೆರಡರ ನಾಡಬಾರಕಿನವರು ಆಗಬಾರದ ಅನಾಹುತ ಆಗಿ ಹೋಯಿತೇನೋ ಎಂಬಂತೆ ಎಗರಿ ಬೀಳುತ್ತಾರೆ.
ನಾನು ಕಮ್ಯುನಿಸ್ಟ್ ಸಿದ್ದಾಂತ ಓದಿ ಬೆಳೆದವನು. ನನಗೆ ಕಮ್ಯುನಿಸ್ಟ್ ನ ಆ ಮೂಲ ಸಿದ್ದಾಂತ ಕಲಿಸಿದ ಪಾಠವೆಂದರೆ, ಕುದುರೆಗೆ ಕಟ್ಟುವಂತಹಾ ಕಣ್ಕಾಪು ಕಿತ್ತೆಸೆದು ಎಲ್ಲವನ್ನೂ ನೋಡುವುದು. ಹಾಗೆ ನೋಡಿದುದರ ಪರಿಣಾಮವಾಗಿಯೇ ನನಗೆ ಗೋಡ್ಸೆ ಮತ್ತು ಗಾಂಧೀ - ಇಬ್ಬರ ವ್ಯಕ್ತಿತ್ವಗಳನ್ನೂ ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ. ನಾನು ಇತಿಹಾಸದ ವಿದ್ಯಾರ್ಥಿ. ಇತಿಹಾಸವನ್ನು ನಿಜವಾದ ಪ್ಯಾಷನ್ ಇಟ್ಟುಕೊಂಡು ಒಡಲೆತ್ನಿಸಿದವನು. ಹೀಗಾಗಿ, ನನಗೆ ಪ್ರಪಂಚದ ಆಗುಹೋಗುಗಳು ಮತ್ತು ವಿ ಯುಕ್ತಿತ್ವಗಳು ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತವೆ. ಇತಿಹಾಸವನ್ನು ಯಾರಾದರೂ ಕೊಚಕಾಲ ಕಷ್ಟಪಟ್ಟು ಮುಚ್ಚಿಡಬಹುದು ಅಥವಾ ಸಪ್ರೆಸ್ಸ್ ಮಾಡಬಹುದೇ ಹೊರತು, ಅದನ್ನು ಟೈಟುಚಲು ಸಾಧ್ಯವಿಲ್ಲ. ಅದನ್ನು ತಮಗೆ ಬೇಕಾದ ಬಣ್ಣದ ಕನ್ನಡಕವಿಟ್ಟುಕೊಂಡು ನೋಡುವುದಾಗಲೀ, ಅದೇ ಬಣ್ಣದಲ್ಲಿ ಇತರರಿಗೆ ತೋರಿಸುವುದಾಗಲೀ ಸಾಧ್ಯವಿಲ್ಲ.
ಅವತ್ತಿನ ದಿನಗಳಲ್ಲಿ ಗಾಂಧೀಜಿ ಎಷ್ಟು ಮಹಾನ್ ವ್ಯಕ್ತಿತ್ವದವರಾಗಿದ್ದರೋ, ಇನ್ನು ಐದು ನೂರು ವರ್ಷಗಳ ಅನಂತರವೂ ಆ ವ್ಯಕ್ತಿತ್ವದ ಮಹಾನತೆ ಹಾಗೇ ಉಳಿದಿರುತ್ತದೆ. ಅದನ್ನು ಯಾವ ಇತಿಹಾಸಕಾರನೂ ಬದಲಿಸಲಾರ. ಇವತ್ತಿನ ಕಾಂಗ್ರೆಸ್ಸಿಗರನ್ನು ಅವರ ಅನುಯಾಯಿಗಳನ್ನು ನೋಡೀ. ಹಾಗೆಯೇ, ಇವತ್ತಿನ ಬಿಜೆಪಿಯ ನಾಯಕರನ್ನು ಮನಸ್ಸಿನಲ್ಲಿಟ್ಟುಕೊಂಡು ಅವತ್ತಿನ ನಾಥೂರಾಮ ಗೋಡ್ಸೆಯವರನ್ನಾಗಲೀ, ನಾರಾಯಣ ದತ್ತೋಪಂತ ಆಪ್ಟೆಯವರನ್ನಾಗಲೀ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಾರದು. ನೀವು ಇತಿಹಾಸವನ್ನು ಅವತ್ತಿನ ಕಾಲಘಟ್ಟಕ್ಕೆ ಹೋಗಿ ಓದದಿದ್ದರೆ, ಅರ್ಥ ಮಾಡಿಕೊಳ್ಳದಿದ್ದರೆ - ಅದು ನಿಮ್ಮ ತಪ್ಪು. ಅವತ್ತಿನ ಪಾತ್ರಗಳ ತಪ್ಪಲ್ಲ. ಗಾಂಧೀಜಿ ತಮ್ಮ 37 ನೆಯ ವಯಸ್ಸಿನ ಅನಂತರ ಬ್ರಹ್ಮಚರ್ಯವನ್ನು ಅಂಗೀಕರಿಸಿದ್ದನ್ನು ಘೋಷಿಸಿದ್ದರು ಎಂಬುದನ್ನು ನೀವು ಅವರ ವ್ಯಕ್ತಿತ್ವದ ಮಹಾನ್ ದೊಡ್ಡ ಅಂಶ ಅಂತ ಭಾವಿಸುವುದಾದರೆ, ಜೀವನ ಪರ್ಯಂತ ಕಠೋರ ಬ್ರಹ್ಮಚರ್ಯವನ್ನು ಪಾಲಿಸಿದ ನಾಥೂರಾಮ ಗೋಡ್ಸೆಯವರನ್ನು ಗಾಂಧೀಜಿಗಿಂತಲೂ ಮಹಾನ್ ವ್ಯಕ್ತಿ ಎಂದು ಸ್ವೀಕರಿಸಬೇಕಾಗುತ್ತದೆ. ಬ್ರಹ್ಮಚರ್ಯವೇ ವ್ಯಕ್ತಿತ್ವದ ಮಹಾನತೆಯ ಅಂಶ ಅನ್ನುವುದಾದರೆ ಅಂತ ಅಂಶ ವಾಜಿಪೇಯಿಗಿದೆ, ಸಾಧ್ವಿ ರಿತಾಂಬರಾರಿಗಿದೆ, ಆರೆಸ್ಸೆಸ್ಸಿನ ಸಾವಿರಾರು ಜನರಿಗಿದೆ. ನಮ್ಮ ಮಾನದಂಡಗಳು ತಪ್ಪಾದಾಗ ಇತಿಹಾಸವನ್ನಾಗಲೀ, ವ್ಯಕ್ತಿತ್ವವನ್ನಾಗಲೀ ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ.
ಇತಿಹಾಸಕಾರರು ಬರೆದಿರುವ ಪ್ರಕಾರ, ಗಾಂಧೀಜಿ ಆ ಕಾಲಘಟ್ಟದ ಬಹುದೊಡ್ಡ ವ್ಯಕ್ತಿತ್ವ, ಒಂದು ನಾಡಿನ ಭವಿತವ್ಯದ ದಿಕ್ಕು ಬದಲಿಸಿದ ಮಹನೀಯ, ಒಬ್ಬ ನಿಸ್ವಾರ್ಥ ದೇಶಪ್ರೇಮಿ.
ಆದರೆ ಗಾಂಧೀಜಿ ತಪ್ಪುಗಳನ್ನು ಮಾಡಲಿಲ್ಲವೇ?
ಅವರ ಅಹಿಂಸಾ ಸಿದ್ದಾಂತ ಭಗತ್ ಸಿಂಗ್, ರಾಜಗುರು, ಸುಖದೇವರನ್ನು ನೇರವಾಗಿ ನೇಣುಗಂಬಕ್ಕೆ ನಡೆಸಿಕೊಂಡು ಹೋದುದನ್ನು ಅವರು ಸಮ್ಮತಿಸಲಿಲ್ಲವೇ?
ಇಡೀ ದೇಶದ ಹಿಂದುಗಳನ್ನು ತಮ್ಮ ಒಂದೇ ಒಂದು ಉಪವಾಸ ಮಂತ್ರದಿಂದ ಕೈಕಟ್ಟಿ ಕೂರುವಂತೆ ಮಾಡಿದ ಬಾಪೂಜಿ,
ಅದೇ ಉಪವಾಸ ಮಂತ್ರವನ್ನು ಯಾವತ್ತಾದರೂ ಭಾರತದ ಮುಸ್ಲಿಮನೊಬ್ಬನ ಮೇಲೆ ಪ್ರಯೋಗಿಸಿದರಾ? ಸುಭಾಷ್ ಚಂದ್ರ ಬೋಸ್ ರಂತಹಾ ದಿಟ್ಟ ನಾಯಕನನ್ನೇ ಸದ್ದಡಗಿಸಿಬಿಟ್ಟ ಬಾಪೂಜಿ, ಯಾವತ್ತಾದರೂ ಮಹಮ್ಮದ್ ಆಲಿ ಜಿನ್ನಾರಂತಹಾ ದೇಶ ವಿಭಜಕರನ್ನು ಗದರಿಸಿದರಾ?
ಆರ್ಯ ಸಮಾಜದ ನಿಷ್ಪಾಪಿ ಮನುಷ್ಯ, ಸ್ವಾಮಿ ಶ್ರದ್ಧಾನಂದರ ಬಳಿ ತಮ್ಮ ಸ್ವಂತ ಮಕ್ಕಳನ್ನು ಬಿಟ್ಟಿದ್ದರು ಗಾಂಧೀಜಿ. ಸ್ವಾಮಿ ಶ್ರದ್ಧಾನಂದರೇ ಆ ಮಕ್ಕಳನ್ನು ಬೆಳೆಸಿದರು, ವಿದ್ಯೆ ಕಲಿಸಿದರು.
ಅಂಥಾ ಸ್ವಾಮಿ ಶ್ರದ್ಧಾನಂದರನ್ನು ಬಹಿರಂಗವಾಗಿ ಟೀಕಿಸಿದರು ಗಾಂಧೀಜಿ. ಮುಂದೆ ಸ್ವಾಮಿ ಶ್ರದ್ಧಾನಂದರ ಹತ್ಯೆಯಾಯಿತು.
ಮತೋನ್ಮಾದಿ ಮುಸ್ಲಿಮನೊಬ್ಬ ಸ್ವಾಮಿ ಶ್ರದ್ಧಾನಂದರನ್ನು ಕೊಂದು ಹಾಕಿದ. ಅಂಥಾ ನಿಷ್ಪಾಪಿಯೊಬ್ಬರನ್ನು ಕೊಂದಿದ್ದಕ್ಕೆ ಗಾಂಧೀಜಿ ಕಣ್ಣೀರಿಡಲಿಲ್ಲ. ಬದಲಿಗೆ ಸ್ವಾಮಿ ಶ್ರದ್ಧಾನಂದರನ್ನು ಕೊಲೆಗೈದ ಉನ್ಮಾದಿ ಮುಸಲ್ಮಾನನನ್ನು ಅಪ್ಪಿಕೊಂಡು "HE IS MY BROTHER" ಎಂದು ಹೇಳಿಕೆ ಕೊಟ್ಟರು.
ಸ್ವತಃ ಗಾಂಧೀಜಿಗೇ ತಮ್ಮ ಅಹಿಂಸಾ ಸಿದ್ದಾಂತ ಸಂಪೂರ್ಣವಾಗಿ ಯಶಸ್ವಿಯಾಗುವುದಿಲ್ಲವೆಂಬುದು ಮನವರಿಕೆಯಾಗಿತ್ತು. ಮುಸಲ್ಮಾನರು ಹಿಂದೂಗಳ ಮೇಲೆ ಹಲ್ಲೆ, ಲೂಟಿ, ಬರ್ಬರ ಹತ್ಯೆಗಳನ್ನು ಮಾಡಿದಾಗ "ಹಿಂದೂಗಳು ಕೈಲಾಗದ ಪುಕ್ಕಲರಂತೆ ವರ್ತಿಸಿದ್ದರಿಂದಲೇ ಮುಸ್ಲಿಂ ದುಷ್ಟರು ಸೃಷ್ಟಿಯಾದರು! ಮುಸ್ಲಿಂ ದುಷ್ಟರು ಹಿಂದುಗಳ ಮನೆಮನೆಗಳಿಗೆ ನುಗ್ಗಿ ಲೂಟಿ, ಅತ್ಯಾಚಾರ, ಹತ್ಯೆಗಳನ್ನು ಮಾಡಿದಾಗ ತಮ್ಮ ಪ್ರಾಣಗಳನ್ನೇ ಕೊಟ್ಟು ಬಡಿದಾಡಬೇಕಾಗಿದ್ದ ಹಿಂದೂಗಳು ಏನು ಮಾಡುತ್ತಿದ್ದರು?" ಎಂದು ಗಾಂಧೀಜಿ ಬಹಿರಂಗವಾಗಿಯೇ ಕೇಳಿದ್ದರು. ಮುಸ್ಲಿಮರು ಲೂಟಿ, ಅತ್ಯಾಚಾರ, ಹತ್ಯೆಗಳನ್ನು ಮಾಡಲು ಬಂದಾಗ, "ಹಿಂದೂಗಳು ಅವರೊಂದಿಗೆ ಬಡಿದಾಡಿ ತಮ್ಮ ಅಕ್ಕತಂಗಿಯರ ಮಾನಪ್ರಾಣಗಳಿಗಾಗಿ ಜೀವ ಕೊಡಲಿಕ್ಕಾಗದಂತಹಾ ಹೇಡಿತನವನ್ನು ನಾನು ಮುಸ್ಲಿಮರ ದುಷ್ಟತನಕ್ಕಿಂತ ಹೀನವಾದುದೆಂದು ಭಾವಿಸುತ್ತೇನೆ!! ಅಂದರು ಮಹಾತ್ಮ ಗಾಂಧೀಜಿ.
ಕೊಂಚ ಅವರ ಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಮುಸ್ಲಿಂ ದುಷ್ಟರು ಮನೆಮನೆಗೆ ನುಗ್ಗಿ ಲೂಟಿ ಮಾಡಿದಾಗ ತಮ್ಮ ಪ್ರಾಣ ಕೊಟ್ಟು ಬಡಿದಾಡಬೇಕಿತ್ತು ಎಂಬುದು ಗಾಂಧೀಜಿಯ ಹಿತವಚನ. ಇಲ್ಲಿ ಲೂಟಿ ಅತ್ಯಾಚಾರ, ಹತ್ಯೆಗಳನ್ನು ಮಾಡಿದ ಮುಸ್ಲಿಮರಿಗೆ ಕಠಿಣ ಶಿಕ್ಷೆಯಾಗಬೇಕು, ಮಾನಭಂಗ ಮಾಡಿದವರನ್ನು ನೇಣು ಹಾಕಬೇಕು ಎಂದು ಕಠೋರವಾಗಿ ಹೇಳುವ ಧೀರೋದಾತ್ತತೆ ಇಲ್ಲ. ಬದಲಿಗೆ "ನೀವೇಕೆ ನಿಮ್ಮ ಪ್ರಾಣ ಕೊಡಲಿಲ್ಲ ಹೇಡಿಗಳೇ" ಎಂದು ಹಿಂದುಗಳನ್ನು ಗದರುತ್ತಾರೆ ಗಾಂಧೀಜಿ!! ಅವರಿಗೆ ಈ ತೆರೆನಾದ ಎರಡು ಮುಖಗಳಿದ್ದವು ಎಂಬುದನ್ನು ಗುರುತಿಸದೇ ಹೋದರೆ, ನಿಮಗೆ ಅವರ ವ್ಯಕ್ತಿತ್ವದಲ್ಲಿ ಕೇವಲ ಅವರ ಅಹಿಂಸಾ ಸಿದ್ದಾಂತ ಕಾಣಿಸುತ್ತದೆ. ಆದರೆ ವಾಸ್ತವ ಇತಿಹಾಸ ಬರೆಯುವವರು ಹಾಗೆ ಕೇವಲ ಅವರು ಬಾಯಲ್ಲಿ ಹೇಳುವ ಅಹಿಂಸೆ, ಉಪವಾಸದ ಮಂತ್ರವನ್ನು ಹುಡುಕಲಾರ. ಅವನು ಗಾಂಧೀಜಿಯಲ್ಲೂ ಇರುವ ಬಲಹೀನತೆಯನ್ನು ಬಯಲಿಗೆಳಿಯುತ್ತಾನೆ. ಗಾಂಧೀಜಿಯ ವ್ಯಕ್ತಿತ್ವ ಮತ್ತು ಅವರ ಬಾಲಿಶ ವರ್ತನೆಗಳ ಧಾಟಿಗಳನ್ನು ಈ ಪುಸ್ತಕದುದ್ದಕ್ಕೂ ನಾನು ನೋಡುತ್ತಾ ಹೋಗಿರುವುದು.
ನಾವು ಸ್ವಾತಂತ್ರ್ಯ ಹೋರಾಟವನ್ನಾಗಲೀ, ದೇಶ ವಿಭಜನೆಯನ್ನಾಗಲೀ ಕಣ್ಣಾರೆ ಕಂಡವರಲ್ಲ. ದೇಶ ವಿಭಜನೆಯೆನೆಂಬುದು ಭಾರತದ ಇತಿಹಾಸದಲ್ಲೊಂದು ಅತ್ಯಂತ ಯಾತನಾದಾಯಕ ಅಧ್ಯಾಯ. "ಭಾರತ ಇಬ್ಭಾಗವಾಗುವುದಾದರೆ, ಅದು ನನ್ನ ಹೆಣದ ಮೇಲೆಯೇ"!! ಅಂತ ಗುಡುಗಿದವರು ಗಾಂಧೀಜಿ. ಆದರೆ ನಿಜಕ್ಕೂ ಇಬ್ಭಾಗವಾಗಿ ಹೋದಾಗ, ಅವರು ಅತ್ಯಂತ ನಿರುಮ್ಮಳವಾಗಿ ಕುಳಿತುಬಿಟ್ಟರು. ಅದೇ ಕ್ಷಣದಲ್ಲಿ ಹಿಂದೂ - ಮುಸ್ಲಿಂ ಹಿಂಸಾಚಾರವಾದಾಗ ಪಶ್ಚಿಮ ಬಂಗಾಳದ ಕಟುಕನೆನ್ನಿಸಿಕೊಂಡಿದ್ದ ಸುಹ್ರಾವರ್ದಿಯನ್ನು ಆತ ಕೇವಲ ಮುಸ್ಲಿಮನೆಂದ ಕಾರಣಕ್ಕೆ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ಸುಹ್ರಾವರ್ದಿಯು ಭಾರತವು ಎಂದಿಗೂ ಮರೆಯಲಾಗದ ಹಿಂದೂ ನರಮೇಧವನ್ನು ಮಾಡಿ ಬಂದು ಗಾಂಧೀಜಿಯ ಪಕ್ಕ ಕುಳಿತಿದ್ದ. ಗಾಂಧೀಜಿಗೆ ಅದೊಂದು ಅಪರಾಧ ಅಂತ ಅನ್ನಿಸಲೇ ಇಲ್ಲ. ಅವರ ಸಾತ್ವಿಕತೆ, ಅಹಿಂಸಾ ಸಿದ್ದಾಂತ - ಎಲ್ಲವೂ ಮೇಲುನೋಟಕ್ಕೆ ಅದ್ಭುತವಾಗಿಯೇ ಕಾಣುತ್ತವೆ. ಆದರೆ ನಿಜಜೀವನಕ್ಕೆ ಬಂದಾಗ - ಒಂದು ದೇಶದ, ಒಂದು ಜನಾಂಗದ, ಮನುಷ್ಯ ಸಂಕುಲದ ಅಳಿವು ಉಳಿವಿನ ಪ್ರಶ್ನೆ ಬಂದಾಗ ಗಾಂಧೀಜಿ ಬೋಧಿಸಿದ ಅಹಿಂಸಾ ಸಿದ್ದಾಂತ ಶುದ್ಧ ಅವಿವೇಕ ಅನ್ನಿಸದಿರಲಾರದು. ಅಂದು ಸ್ವತಃ ಗಾಂಧೀಜಿಯೇ ಯುದ್ಧಕಾಲದಲ್ಲಿ ಬ್ರಿಟಿಷರ ಪರ ನಿಂತರು. ಬ್ರಿಟಿಷರನ್ನು ಯುದ್ಧದಲ್ಲಿ ಸಕ್ರಿಯವಾಗಿ ಬೆಂಬಲಿಸಲು ಭಾರತದ ಯುವಕರಿಗೆ ಕರೆ ನೀಡಿದರು. ತಮ್ಮ ಶಿಷ್ಯಗಣದ ಪ್ರಥಮರಲ್ಲಿ ಒಬ್ಬರಾದ ಬಿರ್ಲಾ ಯುದ್ಧ ಸಾಮಗ್ರಿಗಳನ್ನು ತಯಾರಿಸಿ ಮಾರಿದರೆ ಗಾಂಧೀಜಿ ಅದನ್ನು ಯಾವತ್ತೂ ತಪ್ಪೆನ್ನಲಿಲ್ಲ, ಪಾಪವೆನ್ನಲಿಲ್ಲ. ಬದಲಿಗೆ ಬಿರ್ಲಾ ಬಂಗಲೆಯ ಆತಿಥ್ಯ ಸ್ವೀಕರಿಸಿ ಅಲ್ಲೊಂದು ಚಳಿಗಾಲವನ್ನು ಬೆಚ್ಚಗೆ ಕಳೆದರು. ಆದರೆ ಭಾರತದ ಶ್ರೀಸಾಮಾನ್ಯ ಹಿಂದುಗಳಿಗೆ ಮಾತ್ರ "ನಿರ್ಗತಿಕರಾಗಿರುವ ಮುಸ್ಲಿಂರಿಗೆ ನಿಮ್ಮ ಮನೆ ಬಿಟ್ಟು ಕೊಡೀ, ಅವರನ್ನು ರಕ್ಷಿಸಿ, ಅವರು ನಿಮ್ಮ ಮೇಲೆ ಅತ್ಯಾಚಾರವೆಸಗಿ ಲೂಟಿಮಾಡಿದರೆ ಅವರನ್ನು ಕ್ಷಮಿಸಿ ಅಂದರು.
ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಹಿಂದುಗಳನ್ನೇ, ಅವರದಲ್ಲದ ತಪ್ಪುಗಳಿಗಾಗಿ ಶಿಕ್ಷಿಸುತ್ತಾ ಬಂದರು. ತಮ್ಮ ಉಪವಾಸ, ಸತ್ಯಾಗ್ರಹದ ಮಂತ್ರ ದಂಡವೆತ್ತಿ ಹಿಂದುಗಳನ್ನಷ್ಟೇ ಬೆದರಿಸಿದರು. ಅದಕ್ಕಿಂತ ದೊಡ್ಡ ದುರಂತವೆಂದರೆ, ಅವತ್ತಿನ ಮಟ್ಟಿಗೆ (1948 ರಲ್ಲಿ) ಒಬ್ಬ ಬಾಪೂ ಅಷ್ಟೇ ಏಕೆ, ಇಡೀ ಭಾರತ ದೇಶದ ರಾಜಕೀಯ ಮುಖಂಡತ್ವ - ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬರಿಗಾಲಲ್ಲಿ ಭಾರತಕ್ಕೆ ಓಡಿಬಂದ ಭಾರೀ ದೊಡ್ಡ ಹಿಂದೂ ಸಮೂಹಕ್ಕೆ ಯಾವುದೇ ಆಶ್ರಯ ನೀಡಲಿಲ್ಲ. ಅವರಿಗೆ ಸ್ವಾತಂತ್ರ್ಯ ಸಿಕ್ಕಿದ್ದೇ ಒಂದು ಸಂಭ್ರಮ. ಭಾಷಣಗಳದ್ದೇ ಭರಾಟೆ ಸಡಗರ. ಜಾಗತಿಕ ಮಟ್ಟದಲ್ಲಿ ನೆಹರೂರಂತಹವರು ನಾಯಕರಾಗಿ ಮೆರೆಯ ಹೊರಟರು. ಆದರೆ ದಿಲ್ಲಿಯ ಬೀದಿಬೀದಿಗಳಲ್ಲಿ ನಿರಾಶ್ರಿತ ಹಿಂದೂ ಪ್ರಜಾ ಸಮೂಹ ಕಣ್ಣೀರಿಡುತ್ತಾ, ಆ ಕ್ರೂರ ಚಳಿಗಾಲದ ರಾತ್ರಿಗಳಲ್ಲಿ ಬೆತ್ತಲೆಯಾಗಿ ನಿಂತಿತ್ತು.
ಈ ವಿಪರ್ಯಾಸವನ್ನು ನೀವು ಗಮನಿಸಿ ನೋಡೀ - ಪಾಕಿಸ್ತಾನದಿಂದ ಭಾರತಕ್ಕೆ ಹಿಂದೂಗಳು ವಲಸೆ ಬಂದಂತೆಯೇ, ಭಾರತದಿಂದಲೂ ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋದರು. ಆದರೆ ನಿರಾಶ್ರಿತರಾಗಿ ಅಲ್ಲ!!ಅವರು ತಮ್ಮನ್ನು ತಾವು 'ಮೋಹಾಜಿರ್'ಗಳೆಂದು ಕರೆದುಕೊಂಡರು. ತಮ್ಮದೆಲ್ಲವನ್ನೂ ಭಾರತದಲ್ಲೇ ಬಿಟ್ಟು, ತ್ಯಾಗ ಮಾಡಿ ಪಾಕಿಸ್ತಾನಕ್ಕೆ ಬಂದ ತಮಗೆ ವಿಶೇಷ ಸವಲತ್ತು ಬೇಕೆಂದು ಹಠ ಹಿಡಿದು ಸವಲತ್ತು ಪಡೆದುಕೊಂಡರು. ಅಲ್ಲಿ ತಮ್ಮದೊಂದು ಬಲವಾದ ರಾಜಕೀಯ ಪಕ್ಷ ಕಟ್ಟಿದರು. ಮೂಲ ಪಾಕ್ ನಿವಾಸಿಗಳನ್ನು ಮೀರಿ ಪ್ರಬಲರಾದರು. ಆದರೆ ಪಾಕಿಸ್ತಾನದಿಂದ ಭಾರತಕ್ಕೆ ಓಡಿ ಬಂದ ನಿರಾಶ್ರಿತ ಹಿಂದುಗಳಿಗೆ ಇಲ್ಲಿ ಸಿಕ್ಕಿದ್ದಾದರೂ ಏನು? ಅವರ ಸಮಸ್ಯೆಗಳಿಗೆ ಭಾರತದ ಯಾವ ರಾಷ್ಟ್ರನಾಯಕ ಸ್ಪಂದಿಸಿದ? ಆ ಭಯಂಕರ ಚಳಿಗಾಲದಲ್ಲಿ ನೀರು-ಅನ್ನವಿಲ್ಲದೇ, ರಾತ್ರಿ ಅವರು ಮಲಗಲು ಆಶ್ರಯ ಪಡೆದಿದ್ದ ಮಸೀದಿ, ದರ್ಗಾಗಳಿಂದಲೂ ಅವರನ್ನು ಆ ಕಡುಚಳಿಗಾಲದಲ್ಲೂ ಹಠ ಹಿಡಿದು, ಉಪವಾಸ ಕುಳಿತು ಹೊರಹಾಕಿಸಿದರು ಗಾಂಧೀಜಿ!! ಆದರೆ ನಿರಾಶ್ರಿತರಾಗಿ ಬೆತ್ತಲೆ ನಿಂತಿದ್ದ ಹಿಂದುಗಳಿಗೆ ಅಂತಹಾ ಚಳಿಯಲ್ಲಿ ತಲೆ ಮರೆಸಿಕೊಳ್ಳಲು ಇನಿತು ಜಾಗ ಕೊಡೀ ಎಂದು ತಮ್ಮದೇ ಶಿಷ್ಯರಿಗೆ ಕರೆಕೊಡುವ ಮಟ್ಟಿಗಿನ ಔದಾರ್ಯ ಗಾಂಧೀಜಿಗೆ ಇರಲಿಲ್ಲ. ಗಾಂಧೀಜಿಯವರಲ್ಲಿದ್ದ ಇಬ್ಬಗೆ ನೀತಿಯನ್ನು ಬರೆಯುತ್ತಾ ಹೋದರೆ, ಅವರ ಬಗ್ಗೆ ಎಲ್ಲ ಇತಿಹಾಸದ ವಿದ್ಯಾರ್ಥಿಗಳಿಗೂ ಇರುವ ಅನೇಕ ತಕರಾರುಗಳ ದೊಡ್ಡ ಪಟ್ಟಿಯನ್ನೇ ಬರೆಯಬಹುದು.
ಅಂತಯೇ, ಗಾಂಧೀಜಿಯನ್ನು ಕೊಂದರೆಂಬ ಕಾರಣಕ್ಕೆ ನಾಥೂರಾಮ ಗೋಡ್ಸೆಯವರನ್ನಾಗಲೀ, ನಾರಾಯಣ ದತ್ತೋಪಂತ ಆಪ್ಟೆಯವರನ್ನಾಗಲೀ ರಾವಣ ಸದೃಶರೆಂದು ಚಿತ್ರಿಸುವುದು ಸರಿಯಾ? ವೀರ ಸಾವರ್ಕರ್ ರನ್ನು ದೇಶದ್ರೋಹಿ ಎನ್ನುವುದು ಸರಿಯಾ? ನೀವು ನಿಮ್ಮ ಕಣ್ಕಾಪು ಕಿತ್ತೆಸದು ಓದಿದ್ದೆ ಆದರೆ ಗೋಡ್ಸೆಯವರು ಮತ್ತು ನಾರಾಯಣ ಆಪ್ಟೆಯವರು ದಿಟವಾದ ದೇಶಭಕ್ತರೆಂಬುದು ಮನವರಿಕೆಯಾಗುತ್ತದೆ. ಅವರು ಈ ದೇಶಕ್ಕೆ ನಿಷ್ಠರಾಗಿದ್ದರು, ಪ್ರಾಮಾಣಿಕರಾಗಿದ್ದರು, ಶ್ರಮಜೀವಿಯಾಗಿದ್ದರು, ಇವತ್ತಿನ ಎಲ್ಲ ಜಾತ್ಯತೀತರಿಗಿಂತಲೂ ಹೆಚ್ಚಿನ ಜಾತ್ಯತೀತ ಮನಸ್ಸಿನವರಾಗಿದ್ದರು, ಇತಿಹಾಸವನ್ನು ಓದಿಕೊಂಡಿದ್ದವರಾಗಿದ್ದರು, ಸಜ್ಜನರಾಗಿದ್ದರು ಎಂಬುದು ನಿಮಗೆ ಖಚಿತ ವಾಗುತ್ತದೆ.
ದೇಶಭಕ್ತಿಯ ವಿಷಯದಲ್ಲಿ ಅವರು ಖಂಡಿತವಾಗಿಯೂ ಗಾಂಧೀಜಿಗಿಂತ ಕಡಿಮೆಯವರಾಗಿರಲಿಲ್ಲ. ಆದರೆ ನಾಥೂರಾಮ ಗೋಡ್ಸೆ ಎಂಬ ಭಾವುಕರಿಗೆ ಬದಲಾದ ಕಾಲಮಾನವನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಗುರುಗೋವಿಂದಸಿಂಹರ, ರಾಣಾಪ್ರತಾಪಸಿಂಹರ, ಛತ್ರಪತಿ ಶಿವಾಜಿಯವರ ಕಾಲಕ್ಕೂ, ಭಾರತದೇಶ ವಿಭಜನೆಯಾದ 1948 ರ ಕಾಲಕ್ಕೂ ಬದುಕು ಬದಲಾವಣೆಯಾಗಿದೆ, ನ್ಯಾಯದ ಪರಿಕಲ್ಪನೆ ಬದಲಾಗಿದೆ, ಜಾತಿ-ಸಮುದಾಯಗಳ ಪರಿಕಲ್ಪನೆ ಬದಲಾಗಿದೆ ಎಂಬ ವಿವೇಕ ನಾಥೂರಾಮ ಗೋಡ್ಸೆ ಎಂಬ ಭಾವುಕರಿಗೆ ಇರಲಿಲ್ಲ. 1947 ಕ್ಕೂ ಮತ್ತು 1948 ಕ್ಕೂ ಮಧ್ಯೆ ಆಗಲೇ ವಿದ್ಯಮಾನಗಳು ಬದಲಾಗಿದ್ದವು. ಇದು ಅವರಿಗೆ ಅರ್ಥವಾಗಿರಲಿಲ್ಲ. ಹಿಂದೂ ರಾಷ್ಟ್ರೀಯವಾದಿಗಳ ಆಗ್ರಾ ನಾಯಕ ಮತ್ತು ತಮ್ಮ ಮಹಾಗುರು ವೀರ ಸಾವರ್ಕರ್ ಅವರಿಗೆ ಅಸಾಯಕರಂತೆ ಕಂಡುಬಂದರು. ಅವರನ್ನೇ ಅವರು ಧಿಕ್ಕರಿಸಿದ್ದರು. ಅವರ ಕಣ್ಣಿಗೆ 'ಹಿಂದೂ ಮಹಾಸಭೆ' ಯು ಅಂದಿನ ಕಾಂಗ್ರೆಸ್ಸಿಗರ ಕೈಗೆ ಸಿಕ್ಕಿ ಭ್ರಷ್ಟಗೊಂಡ ಆಟದ ಗೊಂಬೆಯಂತೆ ಕಂಡಿತು. ಈ ಭಾವವನ್ನು ಅವರು ತಮ್ಮ ಕೊನೆಯ ದಿನದತನಕ ವಾದಿಸುತ್ತಾ, ಸಮರ್ಥಿಸುತ್ತಾ ಬಂದರು.
ಉಳಿದಂತೆ ಎಲ್ಲ ನಿರ್ಣಯಗಳನ್ನು ನಾನು ನಿಮಗೆ ಬಿಡುತ್ತೇನೆ. ಈ ಪುಸ್ತಕವನ್ನು ಇತಿಹಾಸದ ಒಂದು ಹೊತ್ತಿಗೆಯಾಗಿ ಓದಿಕೊಳ್ಳಲು ಸಾಧ್ಯವಾದರೆ ನಿಮಗೆ ಹೆಚ್ಚು ಫಾಯಿದೆಯಾಗುತ್ತದೆ. ನನಗಾಗುತ್ತಿರುವ ಸಂತೋಷವೆಂದರೆ, "ಗಾಂಧಿಯನ್ನು ನಾಥೂರಾಮ ಗೋಡ್ಸೆ ಎಂಬುವವನು 1948 ರ ಜನವರಿ 30 ರಂದು ಗುಂಡಿಕ್ಕಿ ಕೊಂಡನು" ಎಂಬುದನ್ನು ಬಿಟ್ಟರೆ ಕನ್ನಡದ ಓದುಗರಿಗೆ ಗಾಂಧೀಹತ್ಯೆಯ ಅನೇಕ ವಿವರಗಳು ಗೊತ್ತಿರಲಿಲ್ಲ, ಅದನ್ನು ಗೊತ್ತು ಮಾಡಿಕೊಟ್ಟ ಸಂತೋಷ ನನ್ನದು.
ಮೂಲ :
"ಗಾಂಧೀ ಹತ್ಯೆ ಮತ್ತು ಗೋಡ್ಸೆ" : ರವಿ ಬೆಳೆಗೆರೆಯವರು ಬರೆದ ಪುಸ್ತಕದ ಮುನ್ನುಡಿಯನ್ನು ಓದಿ ಬರೆದಿದ್ದು.
ಮಂಜುನಾಥ್ ಜಿ ಬರಹ